ADVERTISEMENT

ಸರ್ಕಾರದ ಆದೇಶ ಜಾರಿಗೆ ಗ್ರಾ.ಪಂ. ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:55 IST
Last Updated 11 ಅಕ್ಟೋಬರ್ 2011, 9:55 IST

ಸೊರಬ: ಗ್ರಾಮ ಪಂಚಾಯ್ತಿ ನೌಕರರಿಗೆ ಸರ್ಕಾರದ ಆದೇಶದ ಪ್ರಕಾರ ದೊರಕಬೇಕಾದ ಎಲ್ಲಾ ಸೇವಾ ಸೌಲಭ್ಯವನ್ನು ಕೂಡಲೇ ಜಾರಿಗೊಳಿಸಬೇಕು ಎಂದು  ಗ್ರಾಮ ಪಂಚಾಯ್ತಿ ನೌಕರರ ಸಂಘದ ತಾಲ್ಲೂಕು ಘಟಕ ಆಗ್ರಹಿಸಿದೆ.

ಸೋಮವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಸುಬ್ರಾಯ ಶೆಟ್ಟಿ, ಗ್ರಾ.ಪಂ. ಸಿಬ್ಬಂದಿಗೆ ಸೇವಾ ಪುಸ್ತಕ ನಿರ್ವಹಣೆ, ನಿವೃತ್ತಿ ಉಪದಾನ ನೀಡಿಕೆ, ಜನಶ್ರೀ ವಿಮಾ ಯೋಜನೆ ಸೌಲಭ್ಯ, ಭವಿಷ್ಯ ನಿಧಿ ಯೋಜನೆ, ಕನಿಷ್ಠ ವೇತನ ನಿಗದಿ, ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಅನುದಾನ ಜಮಾ ಮಾಡುವುದು, ಸಿಬ್ಬಂದಿ ಅನುಮೋದನೆ ಹಾಗೂ ರಜೆ ಸೌಲಭ್ಯ ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಆದೇಶಗಳು ಜಾರಿಯಾಗಿವೆ.

ಆದರೆ, ಆದೇಶ ಪಾಲನೆಗೆ ಮುಂದಾಗಿ ಸಿಬ್ಬಂದಿಗೆ ಸೌಲಭ್ಯ ನೀಡಲು ಸೂಕ್ತ ಕ್ರಮ ವಹಿಸುವಲ್ಲಿ ಗ್ರಾಮ ಪಂಚಾಯ್ತಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿದರು.

ನೌಕರರ ಬಗ್ಗೆ ಸ್ಪಂದನಾ ಮನೋಭಾವ ಹೊಂದಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ತಾಲ್ಲೂಕು ಪಂಚಾಯ್ತಿ ಕಚೇರಿ ಮೂಲಕ ಮನವಿಸಲ್ಲಿಸಿದರು.

ಗೌರವಾಧ್ಯಕ್ಷೆ ಶೇಖರಮ್ಮ, ಕಾರ್ಯದರ್ಶಿ ಕೆ. ಮಂಚಪ್ಪ, ಹುಚ್ಚರಾಯಪ್ಪ, ರವಿ, ನಾಗರಾಜ್, ಈಶ್ವರಪ್ಪ, ತೋಪಯ್ಯ ಮೊದಲಾದವರು ಹಾಜರಿದ್ದರು.

ಉಪ ಚುನಾವಣೆ ಫಲಿತಾಂಶ
ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮ ಪಂಚಾಯ್ತಿಗೆ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಕಾಸರಗುಪ್ಪೆಯ ಆರ್.ಕೆ. ಗಣಪತಿ ಗೆಲುವು ಸಾಧಿಸಿದ್ದಾರೆ.

ಹಿಂದಿನ ಸದಸ್ಯ ಕೆ. ಅಜ್ಜಪ್ಪ ತಾಲ್ಲೂಕು ಪಂಚಾಯ್ತಿಗೆ ಆಯ್ಕೆಯಾಗಿ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯಿತು.

ಗಣಪತಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದು, ಅವರ ಗೆಲುವಿಗೆ ಪಕ್ಷದ ವತಿಯಿಂದತಾಲ್ಲೂಕು ಅಧ್ಯಕ್ಷ ದಾನಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.