ಶಿವಮೊಗ್ಗ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಮುಂದೂಡಿಕೆಗೆ ಲೆಕ್ಕವೇ ಇಲ್ಲ! ಪದೇ ಪದೇ ಮುಂದೂಡಲಾಗುತ್ತಿರುವ ಸಾರಿಗೆ ಪ್ರಾಧಿಕಾರದ ಸಭೆ ಈಗ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಜೂನ್ 18ರಿಂದ ನಿಗದಿಯಾಗಿದ್ದ ಸಭೆ ಈಗ ಮತ್ತೆ 19ಕ್ಕೆ ಮುಂದೂಡಲ್ಪಟ್ಟಿದೆ.
ಸಾರಿಗೆ ಪ್ರಾಧಿಕಾರದ ಸಭೆಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರಾಗಿರುತ್ತಾರೆ.
ಕಾರ್ಯದರ್ಶಿಯಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಇರುತ್ತಾರೆ. ಈ ಮೂವರ ಸಮಯ ಹೊಂದಾಣಿಕೆ ಕಷ್ಟವಾಗುತ್ತಿರುವುದರಿಂದ ಸಭೆಗೆ ಒಂದು ದಿವಸ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.
ಸಭೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ಸಾರಿಗೆ ಇಲಾಖೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಭೆ ಪ್ರೇರಕವಾಗುತ್ತಿತ್ತು. ಆದರೆ, ಸಭೆ ನಡೆಸುವ ಆಸಕ್ತಿ ಅಧಿಕಾರಿಗಳಿಗೆ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
`ಸಾರಿಗೆ ಪ್ರಾಧಿಕಾರದ ಸಭೆಗೆ ಜಿಲ್ಲಾಧಿಕಾರಿ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಹಾಜರಿರಬೇಕು. ಅವರ ಬದಲಿಗೆ ಬೇರೆಯವರೂ ಸಭೆ ನಡೆಸಲು ಬರುವುದಿಲ್ಲ. ಜೂನ್ 18ರಂದು ಸಭೆ ನಿಗದಿ ಯಾಗಿತ್ತು. ಅಂದು ಗೃಹ ಸಚಿವರು ಉಡುಪಿಯಲ್ಲಿ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಗಳ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಅದರಲ್ಲಿ ಜಿಲ್ಲಾಧಿಕಾರಿ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಭಾಗವಹಿಸಬೇಕಾಗಿದೆ. ಆದ್ದರಿಂದ, 19ರಂದು ಹಳೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಸಭೆ ನಡೆಯಲಿದೆ' ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಬಿ.ಕುಬೇರಪ್ಪ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.