ಶಿವಮೊಗ್ಗ: ಸಮಾಜದಲ್ಲಿ ಮನುಷ್ಯ ಪ್ರೀತಿ ಕಡಿಮೆಯಾಗುತ್ತಿರುವುದರಿಂದ ಹಲವು ರೀತಿಯ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಸಾಹಿತ್ಯದಿಂದ ಮಾತ್ರ ಮನುಷ್ಯ ಪ್ರೀತಿಯನ್ನು ಪುನರ್‌ವೃದ್ಧಿಸಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಪ್ರತಿಪಾದಿಸಿದರು.
ನಗರದ ಕರ್ನಾಟಕದ ಸಂಘದಲ್ಲಿ ಗುರುವಾರ ಹಮ್ಮಿಕೊಂಡಿದ್ದ 83ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಳ್ಳೆಯ ಸಾಹಿತ್ಯದಲ್ಲಿ ಮನುಷ್ಯ ಪ್ರೀತಿ ಕಾಣಬಹುದಾಗಿದ್ದು, ಅದನ್ನು ಓದುವುದರ ಮೂಲಕ ಜಗತ್ತಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜನರಿಗೆ ಸಾವಿನ ಬಗ್ಗೆ ಭೀತಿ ಆರಂಭವಾಗಿದೆ. ಇದರಿಂದ ಸಮಾಜದಲ್ಲಿ ಅಸ್ಥಿರತೆ ಸೃಷ್ಟಿಯಾಗಿದೆ. ಈ ಅಸ್ಥಿರತೆಯಿಂದಾಗಿ ಹಣ ಮಾಡುವ ದಾಹ ಆರಂಭವಾಗಿದೆ. ಎಲ್ಲರನ್ನೂ ಅನುಮಾನದಿಂದ ನೋಡುವ ಮನಸ್ಥಿತಿಗೆ ಸಮಾಜ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯದ ಚಟುವಟಿಕೆಗಳು ಈಗಿನ ಯುವಜನರಲ್ಲಿ ಯಾವುದೇ ಕುತೂಹಲ ಮೂಡಿಸುತ್ತಿಲ್ಲ. ಜನಪ್ರಿಯತೆಯ ಸೆಳೆತ ಇರುವ ಕಡೆ ಯುವ ಜನಾಂಗ ಹೋಗುತ್ತಿದೆ. ಸಾಹಿತ್ಯ ಅಂತಹ ಸೆಳೆತಗಳನ್ನು ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಚರ್ಚೆಗಳಾಗಬೇಕು ಎಂದರು.
ಲೇಖಕನಿಗೆ ಮಗುವಿನ ಮುಗ್ಧತೆ ಬೇಕು. ಹಿಂಸೆ, ಕೌರ್ಯ, ನೋವು, ಸಂಕಟ ಅನುಭವಿಸಿದರೆ ಮಾತ್ರ ಒಳ್ಳೆಯ ಸಾಹಿತ್ಯ ರಚನೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳನ್ನು ಓಲೈಕೆ ಮಾಡುವ ಸಾಹಿತಿಗಳು ಇದ್ದು, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ, ಅವರ ಕೃತಿಗಳನ್ನು ಉದಾಹರಿಸುವ ಪದ್ಧತಿಯೇ ನಮ್ಮಲ್ಲಿ ಇಲ್ಲವಾಗಿದೆ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷ ಎಸ್.ವಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ್ ಸ್ವಾಗತಿಸಿದರು.
ತದನಂತರ ತುಮರಿಯ ಕಿನ್ನರ ಮೇಳದ ಸುಶೀಲಾ ಕೆಳಮನೆ ಅವರು ಸರಸ್ವತಿ ಬಾಯಿ ರಾಜವಾಡೆ ಅವರ ಆತ್ಮಕಥೆ ಆಧರಿಸಿದ ‘ಗಿರಿಬಾಲೆ’ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.