ADVERTISEMENT

ಸ್ತ್ರೀಶಕ್ತಿ ಉತ್ಪನ್ನ ಖರೀದಿಗೆ ಪ್ರತ್ಯೇಕ ಹಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 10:20 IST
Last Updated 8 ಜನವರಿ 2011, 10:20 IST

ಶಿವಮೊಗ್ಗ: ಸ್ತ್ರೀಶಕ್ತಿ ಸಂಘಗಳು ಉತ್ಪಾದಿಸುವ ಫಿನಾಯಿಲ್, ಚಾಕ್‌ಪೀಸ್ ಸೇರಿದಂತೆ ಕೆಲ ಕರಕುಶಲ ವಸ್ತುಗಳನ್ನು ಸರ್ಕಾರ ಖರೀದಿಸಲು ಬರುವ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಡುವಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿರುವ ಏಳು ದಿನಗಳ ‘ಕೊಡಚಾದ್ರಿ ವೈಭವ-3’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈ ವಸ್ತುಗಳನ್ನು ಸರ್ಕಾರ, ದೊಡ್ಡ ದೊಡ್ಡ ಕಾರ್ಖಾನೆಗಳಿಂದ ಖರೀದಿಸುತ್ತಿದೆ. ಆದರೆ, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ದೃಷ್ಟಿಯಿಂದ ಇವುಗಳನ್ನು ಸ್ತ್ರೀಶಕ್ತಿ ಸಂಘಗಳಿಂದ ತಯಾರಿಸಲು ಪ್ರೋತ್ಸಾಹ ನೀಡಬೇಕು. ಜತೆಗೆ ಸರ್ಕಾರವೇ ಆ ವಸ್ತುಗಳನ್ನು ಖರೀದಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಭವನಕ್ಕೆ ಆದ್ಯತೆ: ಅಲ್ಲದೇ, ಪ್ರತಿ ತಾಲ್ಲೂಕುಗಳಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಈ ಹಿಂದೆಯೇ ಸರ್ಕಾರ ನಿರ್ಧರಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಇದು ಸಾಕಾರಗೊಂಡಿಲ್ಲ. ಕೇವಲ 70-75 ತಾಲ್ಲೂಕುಗಳಲ್ಲಿ ಮಾತ್ರ ಭವನಗಳು ನಿರ್ಮಾಣಗೊಂಡಿವೆ. ಆದ್ದರಿಂದ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಸ್ತ್ರೀಶಕ್ತಿ ಭವನ ತಲೆಯೆತ್ತಲು ವಿಶೇಷ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ಸರ್ಕಾರ ಮತ್ತು ಸಮಾಜದ ಅನುಕಂಪ ಬೇಡ. ಪ್ರೋತ್ಸಾಹ, ಶಿಕ್ಷಣ ಕೊಡಿ. ಆ ಮೂಲಕ ಆರ್ಥಿಕವಾಗಿ ಸದೃಢವಾಗುವಂತೆ ಮಾಡಿ. ಅಂದಾಗ ಇಡೀ ರಾಜ್ಯ ಸದೃಢವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  ಮಹಿಳೆಯರು ಸಾಕಷ್ಟು ಶ್ರಮಪಡುತ್ತಾರೆ. ಪುರುಷರಿಗಿಂತ ಹೆಚ್ಚು ಕ್ಷಮತೆ ಇದೆ. ಆದರೆ, ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಪ್ರತಿವರ್ಷ ‘ಕೊಡಚಾದ್ರಿ ವೈಭವ’ದ ಮೂಲಕ ಮಾರುಕಟ್ಟೆ ಕಲ್ಪಿಸಿರುವ ಕಲ್ಪನೆ ಅಧಿಕಾರಿಗಳಿಗೆ ಮಾದರಿ ಎಂದರು.


ಫೆಡರೇಷನ್‌ಗೆ ಸಲಹೆ: ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಮಾತನಾಡಿ, ಕರಕುಶಲ ವಸ್ತುಗಳಿಗೆ ಹೊರದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇಲ್ಲಿನ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಹೊರದೇಶಗಳಿಗೆ ರಫ್ತು ಮಾಡಲು ಹೋಬಳಿ ಮತ್ತು ಜಿಲ್ಲಾಮಟ್ಟದಲ್ಲಿ ಫೆಡರೇಷನ್‌ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನಾಗರಾಜ್, ರಾಜ್ಯ ಮಹಿಳಾ ಆಯೋಗದ ನೂತನ ಅಧ್ಯಕ್ಷೆ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕೊಡಚಾದ್ರಿ ಟ್ರಸ್ಟ್‌ನ ಅಧ್ಯಕ್ಷರೂ ಆದ ಆರ್.ಎಂ. ಮಂಜುನಾಥಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT