ಶಿವಮೊಗ್ಗ: ಇಡೀ ದೇಶ ಮುಸ್ಲಿಂ ಮಯವಾಗುತ್ತಿರುವ ಸಂದರ್ಭದಲ್ಲಿ ಹಿಂದೂ ಸಾಮ್ರಾಜ್ಯ ಕಟ್ಟಿದ ಸ್ವಾಭಿಮಾನಿ ಛತ್ರಪತಿ ಶಿವಾಜಿ ಮಹಾರಾಜ. ಅವರ ಸೈದ್ಧಾಂತಿಕ ನೆಲಗಟ್ಟು, ನಮ್ಮದು ಒಂದೇ ಆಗಿತ್ತು. ಹಾಗಾಗಿ, ಅವರು ನಮಗೆ ಎಲ್ಲ ರೀತಿಯಿಂದಲೂ ಸಮೀಪದವರು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ತಿಳಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ಪರಂಪರೆ, ಸ್ವಾಭಿಮಾನ ಬಡಿದೆಬ್ಬಿಸಿದವರು ಶಿವಾಜಿ. ಅವರು ಒಂದು ರೀತಿಯಲ್ಲಿ ನಮ(ಬಿಜೆಪಿ)ಗೆ ಮನೆದೇವರು ಎಂದು ಬಣ್ಣಿಸಿದರು.ಇದೇ ಜಿಲ್ಲೆಯ ಕೆಳದಿ ಚನ್ನಮ್ಮೋಜಿ ಶಿವಾಜಿ ಮಗನಿಗೆ ರಕ್ಷಣೆ ಕೊಟ್ಟಿರುವ ಇತಿಹಾಸವಿದೆ. ಅಲ್ಲದೇ, ಶಿವಾಜಿ ತಂದೆ ಷಹಾಜಿ ಅವರ ಸಮಾಧಿ ಜಿಲ್ಲೆಯ ಗಡಿಭಾಗದ ಹೊದಿಗೆರೆಯಲ್ಲಿದೆ.
ಈ ದಿಸೆಯಲ್ಲಿ ಶಿವಾಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ಜಿಲ್ಲೆಯ ಕೀರ್ತಿ ಬೆಳಗಬೇಕು ಎಂದು ತಿಳಿಸಿದರು.
ಕೆಲವರು ಶಿವಾಜಿ ಜಯಂತಿ ಸೇರಿದಂತೆ ಕೆಲವು ಜಯಂತಿಗಳಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ, ಈ ಫ್ಲೆಕ್ಸ್‌ಗಳಲ್ಲಿ ಮಹಾತ್ಮರ ಭಾವಚಿತ್ರವನ್ನು ಸಣ್ಣದಾಗಿ ಹಾಕಿಸಿ, ತಮ್ಮ ಫೋಟೋಗಳನ್ನು ದೊಡ್ಡದಾಗಿ ಹಾಕಿಸಿಕೊಳ್ಳುತ್ತಿದ್ದಾರೆ. ಇದು ಅಂತಹ ಮಹಾನ್ ನಾಯಕರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಾಜಿ ಯಾವುದೇ ರಾಜ್ಯ, ಭಾಷೆ, ಪ್ರಾಂತ್ಯಕ್ಕೆ ಸೀಮಿತರಾದವರಲ್ಲ; ಶಿವಾಜಿ ಪುತ್ಥಳಿ ಅನಾವರಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
`ಹಿಂದೂಗಳು ಮುಸ್ಲಿಂರಾಗುತ್ತಿದ್ದರು~
ಧರ್ಮಪ್ರಚಾರಕ ಎಂ. ಮುನಿಯಪ್ಪ ಮಾತನಾಡಿ, ಶಿವಾಜಿ ಇಲ್ಲದಿದ್ದರೆ ದೇಶದ ಎಲ್ಲ ಹಿಂದೂಗಳು ಮುಸ್ಲಿಂರಾಗುತ್ತಿದ್ದರು. ಹಿಂದೂ ಧರ್ಮದ ರಕ್ಷಣೆಗೆ ಹೋರಾಡಿದ ಮಹಾನ್ ಶೂರ, ಸ್ವಾಭಿಮಾನಿ. ಯಾವುದೋ ಒಂದು ವರ್ಗದ ಜನರನ್ನು ಕಟ್ಟಿಕೊಂಡು ಹೋರಾಟ ಮಾಡಿದವರಲ್ಲ. ತನ್ನ ತಾಯಿಯ ಪ್ರೇರಣೆಯಲ್ಲಿ ಶೌರ್ಯ, ಸಾಹಸ, ದೇಶಪ್ರೇಮವನ್ನು ಬೆಳೆಸಿಕೊಂಡ ಶಿವಾಜಿ, ಹಿಂದೂ ಧರ್ಮ ಹಾಗೂ ಗುಡಿಗೋಪುರಗಳ ರಕ್ಷಣೆಗಾಗಿ 256 ಯುದ್ಧಗಳನ್ನು ಮಾಡಿದ್ದರೂ ಎಂದೂ ಸೋಲನ್ನು ಒಪ್ಪಿಕೊಂಡವರಲ್ಲ ಎಂದರು.
ಮಾರ್ಕ್ಸ್, ಮೆಕಾಲೆ ಶಿಕ್ಷಣದಿಂದಾಗಿ ನಾವೆಲ್ಲ ದಾರಿತಪ್ಪಿದ್ದೇವೆ. ಮಹರ್ಷಿ ಶಿಕ್ಷಣ ಇಂದಿನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಆರ್. ಕೆ. ಸಿದ್ದರಾಮಣ್ಣ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್, ಕ್ಷತ್ರಿಯ ಸಮಾಜದ ಮುಖಂಡರಾದ ಆರ್. ಚಂದ್ರರಾವ್ ಘಾರ್ಗೆ, ಬಾಲಕೃಷ್ಣ ನಿಕ್ಕಂ, ಶ್ರೀಧರ್‌ರಾವ್, ಸತ್ಯನಾರಾಯಣರಾವ್, ಶ್ರೀಧರ್‌ಮೂರ್ತಿ ನವಿಲೆ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಸಿಇಒ ಡಾ.ಸಂಜಯ್ ಬಿಜ್ಜೂರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಹಿರಿಯ ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಸ್ವಾಗತಿಸಿದರು. ರಮೇಶ್‌ಬಾಬು ಕಾರ್ಯಕ್ರಮ ನಿರೂಪಿಸಿದರು.
ವರ್ಷದೊಳಗೆ ಪುತ್ಥಳಿ
ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಶಿವಮೊಗ್ಗ ನಗರದ ಆಲ್ಕೊಳ ವೃತ್ತದಲ್ಲಿ ಒಂದು ವರ್ಷದ ಒಳಗಾಗಿ ಅನಾವರಣ ಮಾಡಲು ಅಗತ್ಯ ಸಹಕಾರ, ನೆರವು ನೀಡುವುದಾಗಿ ಶಾಸಕ ಕೆ.ಎಸ್. ಈಶ್ವರಪ್ಪ ಪ್ರಕಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ರಕ್ಷಣೆಗೆ ಶ್ರಮಿಸಿದ ಮಹಾನ್ ನಾಯಕ ಶಿವಾಜಿ. ತಾಯಿಯ ಪ್ರೇರಣೆಯಿಂದಾಗಿ ಶಿವಾಜಿ ಬಹುದೊಡ್ಡ ಪರಾಕ್ರಮಿ ಆಗಿ, ದೇಶಾಭಿಮಾನಿಯಾಗಿ ಬೆಳೆದರು. ದೇಶವನ್ನು ಕಾಡುತ್ತಿದ್ದ ಮೊಗಲರಿಂದ ದೇಶವನ್ನು ಸಂರಕ್ಷಿಸುವುದರ ಜತೆಗೆ, ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಮೂಲಕ ಇತಿಹಾಸ ಪುರುಷರಾಗಿದ್ದಾರೆ ಎಂದರು.
ಒಬ್ಬರಿಗಾಗಿ ಕಾಯುವುದೇಕೆ?
10.30ಕ್ಕೆ ಇರುವ ಕಾರ್ಯಕ್ರಮ ಆರಂಭವಾಗಿದ್ದು 11.45ಕ್ಕೆ. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಬರುವುದು ಇನ್ನೂ ತಡವಾಗುತ್ತದೆಂಬ ಕಾರಣಕ್ಕೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ತಕ್ಷಣ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಅವರಿಗೆ ಮಾತನಾಡಲು ಕರೆ ಬಂತು.
ಇದನ್ನು ಕಂಡ ಪ್ರೇಕ್ಷಕರೊಬ್ಬರು ಎದ್ದು ನಿಂತು, ಯಾರೋ ಒಬ್ಬರಿಗಾಗಿ ಕಾರ್ಯಕ್ರಮ ಉದ್ಘಾಟಿಸದೆ ಮಾತನಾಡುವುದು ಸರಿ ಅಲ್ಲ ಎಂದರು. ಕೊನೆಗೆ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಆಯನೂರು ಮಂಜುನಾಥ ಅವರ ಭಾಷಣ ಮುಗಿಯುತ್ತಿದ್ದಂತೆ ರಾಘವೇಂದ್ರ ಆಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.