ADVERTISEMENT

ಹುಡುಕಾಟದ ವಸ್ತುಗಳಿಗೆ ಆದ್ಯತೆ: ಕಾಸರವಳ್ಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:50 IST
Last Updated 13 ಅಕ್ಟೋಬರ್ 2012, 8:50 IST

ಸಾಗರ: ಹಲವು ರೀತಿಯ ಹುಡುಕಾಟಗಳಿಗೆ ದಾರಿ ಮಾಡಿಕೊಡುವ ವಸ್ತುಗಳನ್ನೇ ನನ್ನ ಸಿನಿಮಾಗಳ ಕತೆಯಾಗಿ ಆರಿಸಿಕೊಂಡಿದ್ದೇನೆ ಎಂದು ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ  ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಶುಕ್ರವಾರ ಚಲನಚಿತ್ರ ಕುರಿತು ನಡೆದ ಗೋಷ್ಠಿಯಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
`ಸಿನಿಮಾಗಳಲ್ಲಿ ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ನೇರ ಅಥವಾ ಸ್ಪಷ್ಟ ನಿಲುವು ತಾಳಲು ನಾನು ಬಯಸುವುದಿಲ್ಲ. ವಿಷಯಗಳು ಹಲವು ತರಹದ ವ್ಯಾಖ್ಯಾನಗಳಿಗೆ ಒಡ್ಡಿಕೊಳ್ಳುವಂತೆ ಮಾಡಿ ಕೊಳ್ಳುವುದರಲ್ಲಿ ನನಗೆ ಹೆಚ್ಚು ಆಸಕ್ತಿ ಇದೆ~ ಎಂದರು.

ಸಿನಿಮಾವನ್ನು ಅರ್ಥೈಸುವಾಗ ಅದರ ಒಳಗಡೆ ಏನೇನು ಅರ್ಥಗಳು ಘಟಿಸಿವೆ ಎಂಬುದನ್ನು ನೋಡಬೇಕೆ ವಿನಾ ಕೊನೆಯ ದೃಶ್ಯದ ಮೂಲಕ ತೀರ್ಮಾನ ಮಾಡುವುದು ತಪ್ಪು ಗ್ರಹಿಕೆಯಾಗುತ್ತದೆ ಎಂದು ಹೇಳಿದರು.
ಸಿನಿಮಾದಲ್ಲಿ ವಸ್ತುವಿನ ಒಳನೋಟಗಳನ್ನು ದೃಶ್ಯದ ಪ್ರತಿಯೊಂದು ಕೋನದಲ್ಲಿ, ಪಾತ್ರ ಚಿತ್ರಣದಲ್ಲಿ, ಹಿನ್ನೆಲೆ ಸಂಗೀತದಲ್ಲಿ ಗ್ರಹಿಸುವಂತೆ ಮಾಡಬೇಕೆ ವಿನಃ ಭರತ ವಾಕ್ಯದ ರೀತಿಯಲ್ಲಿ ಚಿತ್ರದ ಕೊನೆಯಲ್ಲಿ ಒಂದು ಸಂದೇಶ ಹೇಳುವುದು ಪ್ರೇಕ್ಷಕನ ಗ್ರಹಣ ಶಕ್ತಿ ಕುಂಠಿಸಿದಂತೆ. ಈ ರೀತಿಯ ಚಿತ್ರ ನಿರ್ಮಾಣ  ಫ್ಯಾಸಿಸ್ಟ್ ಆಗುವ ಅಪಾಯ ಕೂಡ ಇದೆ ಎಂದು ವಿಶ್ಲೇಷಿಸಿದರು.

ಮನಸ್ಸಿನಲ್ಲಿ ಹುಟ್ಟುವ ಚಿತ್ರಗಳ ಮೂಲಕ ಚಲನಚಿತ್ರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನನ್ನ ಸಿನಿಮಾಗಳಲ್ಲಿ ಉದ್ದೇಶಪೂರ್ವಕವಾಗಿ ನಿರೂಪಣೆ ಒಂದೇ ಲಯದಲ್ಲಿ ಸಾಗುತ್ತದೆ. ಚಿತ್ರದ ಅಂತ್ಯದಲ್ಲಿ ಅದರ ಲಯ ಬದಲಾಗಬೇಕು ಎಂಬ ಸಿದ್ಧ ಮಾದರಿಯಲ್ಲಿ ನನಗೆ ನಂಬಿಕೆ ಇಲ್ಲ. ಈ ರೀತಿ ಸಿದ್ಧ ಮಾದರಿಯ ಲಯ ಮುರಿಯುವುದು ಸಿನಿಮಾದ ರಾಜಕೀಯ ನಿಲುವಿನ ಲಯವನ್ನು ಧ್ವನಿಸುವಂತದ್ದು ಕೂಡ ಆಗಿದೆ ಎಂದು ವ್ಯಾಖ್ಯಾನಿಸಿದರು.

ಸಿನಿಮಾ ಮಾಡುವಾಗ ಅದರ ಕತೆಯ ಪರಿಕಲ್ಪನೆ ಏನು ಎಂಬುದರ ಬಗ್ಗೆ ನಿರ್ದೇಶಕನಿಗೆ ಸ್ಪಷ್ಟತೆ ಇರಬೇಕು. ಈ ಪರಿಕಲ್ಪನೆಯನ್ನು ಚಿತ್ರಣ ಹಿಂಬಾಲಿಸಬೇಕು. ಮುಂದೇನು ಮುಂದೇನು ಎಂಬ ಜನಪ್ರಿಯ ಸಿನಿಮಾಗಳ ಮಾದರಿಗಿಂತ, ಅದು ಹೇಗಾಯಿತು ಎಂಬುದನ್ನು ಚಿತ್ರಿಸುವುದಕ್ಕೆ ನಾನು ಹೆಚ್ಚು ಒತ್ತು ನೀಡುತ್ತೇನೆ ಎಂದರು.

ಮನುಷ್ಯ ಹಾಗೂ ವ್ಯವಸ್ಥೆಯ ನಡುವಣ ಸಂಬಂಧವನ್ನು ಸರಳವಾಗಿ ಸೂತ್ರೀಕರಿಸಲು ಸಾಧ್ಯವಿಲ್ಲ ಎಂಬ ನೆಲೆಗಟ್ಟಿನ ಮೇಲೆ ಕುಂ. ವೀರಭದ್ರಪ್ಪ ಅವರ ಕತೆ ಆಧರಿಸಿದ `ಕೂರ್ಮಾವತಾರ~ ಚಿತ್ರ ನಿರ್ಮಿಸಿದೆ. ಇಲ್ಲಿ `ಮಹಾತ್ಮಾ~ ಗಾಂಧಿ, `ಸಾಮಾನ್ಯ~ ಗಾಂಧಿ ಎಂಬ ಪ್ರತಿನಿಧೀಕರಣದ ಚಿತ್ರಣವಿದೆ. ಏಕಕಾಲಕ್ಕೆ ನಾಲ್ಕಾರು ತರಹದ ಗಾಂಧಿಗಳ ಪ್ರತಿನಿಧೀಕರಣ ಕತೆಯಲ್ಲಿರುವುದು ಕುತೂಹಲ ಮೂಡಿಸಿದ ಕಾರಣಕ್ಕೆ ಇದನ್ನೆ ಚಿತ್ರ ಮಾಡಿದೆ ಎಂದು ಹೇಳಿದರು.

ಗೋಷ್ಠಿಯನ್ನು ನಿರ್ವಹಿಸಿದ ಲೇಖಕ ಮನು ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿ, ತಾತ್ವಿಕತೆಗೆ ಸಂಬಂಧಿಸಿದಂತೆ ಯಾವುದೇ ಒಂದು ಸಿದ್ಧಾಂತದ ಬಗ್ಗೆ ಪೂರ್ತಿಯಾಗಿ ಪ್ರತಿಪಾದನೆ ಮಾಡದೆ ಆ ಬಗ್ಗೆ ತೀರ್ಪು ನೀಡದೇ ಇರುವುದು ಕಾಸರವಳ್ಳಿ ಚಿತ್ರಗಳ ವಿಶೇಷತೆಯಾಗಿದೆ. ಯಾವುದೇ ಒಂದು ಸಿದ್ಧಾಂತವನ್ನು ಎತ್ತಿ ಹಿಡಿಯದೆ ಅನೇಕ ವಿರೋಧವಿರುವ ಸಿದ್ಧಾಂತವನ್ನು ಚಿತ್ರಿಸುವುದು ಕೂಡ ಒಂದು ಸೈದ್ಧಾಂತಿಕ ಯಾತ್ರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.