ಮನುಷ್ಯ ಹೊಟ್ಟೆಪಾಡಿಗಾಗಿ ಹಲವು ವೃತ್ತಿಯನ್ನು ಆಯ್ದುಕೊಳ್ಳುವುದು ಸಹಜ. ಪ್ರತಿಯೊಬ್ಬರಿಗೂ ಇಂತಹದ್ದೇ ವೃತ್ತಿ ಎಂಬುದಿಲ್ಲ.
ಅದರೆ, 7-8ರ ವಯಸ್ಸಿನ ಪೋರಿ ತನ್ನ ಸಾಧನೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಮಾತ್ರ ಸೋಜಿಗ.
ಯಾರು ಈ ಪೋರಿ...! ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇವರಿಗೆ ಸ್ವಂತ ನೆಲೆಯಿಲ್ಲ. ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತ ತಮ್ಮ ರಾಜ್ಯದ ಗಡಿಯಾಚೆ ಸಾವಿರಾರು ಮೈಲಿದಾಟಿ ಬಂದಿದ್ದಾರೆ.
ಮೂಲತಃ ಮಧ್ಯಪ್ರದೇಶದ ವಿಲಾಸಪುರದವಳಾದ ಅಂಜಲಿ ಎಂಬ ಈ ಬಾಲೆ ತನ್ನ ಕುಟುಂಬದ ಜೀವನಕ್ಕೆ ಆಯ್ದುಕೊಂಡ ವೃತ್ತಿ ದೊಂಬರಾಟ. ಚತುರೆಯಾದ ಈ ಬಾಲೆ ಕ್ಷಣ ಕ್ಷಣಕ್ಕೂ ಹಗ್ಗದ ಮೇಲೆ ಹಲವಾರು ರೀತಿಯ ಆಸನಗಳ ಬದಲಿಸುತ್ತಾ ವೈವಿಧ್ಯಮಯ ನಡಿಗೆ ಹಾಕುತ್ತಾ ಜೀವದ ಹಂಗುತೊರೆದು ಸಾಗುವ ವೈಖರಿ ನೋಡುಗರ ಮೈನವಿರೇಳಿಸುವಂತಹವು.
ನಾವು ದೊಂಬರಾಟ ನೋಡಿ ಮನರಂಜನೆ ಪಡೆಯುತ್ತೇವೆ. ಅವರು ಎಷ್ಟೇ ಚತುರರಾದರೂ, ಒಮ್ಮಮ್ಮೆ ಆಯ ತಪ್ಪಿದರೆ ಅಂಗವಿಕಲರಾಗುವ ಜೀವಕ್ಕೆ ಸಂಚಕಾರ ತಂದು ಕೊಳ್ಳುವ ಸಾಧ್ಯತೆ ಹೆಚ್ಚು. ಈ ಅಪಾಯಕಾರಿ ಆಟ ಅವರ ದೈನಂದಿನ ಬದುಕಿಗೆ ಆನಿವಾರ್ಯ.
ಇಲ್ಲಿ ಕಟು ವಾಸ್ತವದ ಬದುಕಿನ ಮನ ಕಲಕುವ ಎರಡು ಚಿತ್ರಣಗಳಿವೆ. ತಾಯಿಯ ಡೋಲಿನ ತಾಳಕ್ಕೆ ತಕ್ಕಂತೆ ಹಗ್ಗದ ಮೇಲೆ ನಡೆಯುತ್ತಿರುವ ಬಾಲೆ. ಇನ್ನೂಂದು ಪ್ಲಾಸ್ಟಿಕ್ ಟಬ್ಬಿನಲ್ಲಿ ಹರಕು ಚಿಂದಿ ಬಟ್ಟೆಗಳ ಮಧ್ಯೆ ತನ್ನದೇ ಲೋಕದಲ್ಲಿ ತಲ್ಲೆನವಾಗಿರುವ 4 ತಿಂಗಳ ಹಸುಗೂಸು. ಇವರ ಬದುಕು ನಮ್ಮನ್ನು ಚಿಂತನೆಗೆ ಹಚ್ಚದೇ ಹೋದರೆ ನಾವು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ ಎಂದೇ ಆರ್ಥ.
ಒಟ್ಟಾರೆ ದೇಶದ ಯಾವುದೇ ರಾಜ್ಯಕ್ಕೆ ಹೋದರೂ, ಎಲ್ಲಾ ಸರ್ಕಾರಗಳ ಭರವಸೆ ಒಂದೇ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇರಲು ಒಂದು ಸೂರು, ತೊಡಲು ಬಟ್ಟೆ ಹೊಟ್ಟೆಗೆ ಅನ್ನಕೊಡುವುದೇ ಆಗಿವೆ. ಈ ಘೋಷಣೆಗಳು ಕೇವಲ ಜನತೆಗೆ ದಿಕ್ಕು ತಪ್ಪಿಸುವ ತಂತ್ರವಾಗಿವೆ ಹೊರತು ಯಾವುದೇ ಬದಲಾವಣೆ ಕಂಡಿಲ್ಲ. ಇಂತಹ ಕುಟುಂಬಗಳಿಗಾಗಿ ಸರ್ಕಾರ ಏನು ಮಾಡಿದೆ ಎಂಬುದೇ ಬಗೆಹರಿಯದ ಯಕ್ಷಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.