ADVERTISEMENT

ಮೇಲಿನ ಕುರುವಳ್ಳಿ-ಮುಳುಬಾಗಿಲು ಗ್ರಾ.ಪಂ.ಗಳ ₹49 ಲಕ್ಷ ವಿದ್ಯುತ್‌ ಬಿಲ್‌ ಬಾಕಿ

ಮೆಸ್ಕಾಂ ಶಾಕ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 7:18 IST
Last Updated 31 ಡಿಸೆಂಬರ್ 2021, 7:18 IST
ಮೇಲಿನ ಕುರುವಳ್ಳಿ ಪಂಚಾಯಿತಿಯ ಗ್ರಾಮ ಸೌಧ
ಮೇಲಿನ ಕುರುವಳ್ಳಿ ಪಂಚಾಯಿತಿಯ ಗ್ರಾಮ ಸೌಧ   

ತೀರ್ಥಹಳ್ಳಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರುವಳ್ಳಿ ಹಾಗೂ ಮುಳುಬಾಗಿಲು ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು ₹ 49 ಲಕ್ಷ ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿವೆ. ಬುಧವಾರ ಮೆಸ್ಕಾಂ ಪಂಚಾಯಿತಿ ಕಟ್ಟಡದ ವಿದ್ಯುತ್‌ ಸಂಪರ್ಕ ಕಡಿತ ಮಾಡಿ ಬಾಕಿ ವಸೂಲಿಗೆ ಮುಂದಾಗಿದೆ.

ವಿದ್ಯುತ್‌ ಬಿಲ್ ಪಾವತಿಸುವಂತೆ ಮೆಸ್ಕಾಂ ಸೂಚನೆ ನೀಡಿದೆ. ಆದರೆ, ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಮೆಸ್ಕಾಂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ. ಬಾಕಿ ವಸೂಲಿ ಪ್ರಕ್ರಿಯೆ ಈಗ ಮೆಸ್ಕಾಂ ಹಾಗೂ ಪಂಚಾಯಿತಿ ಆಡಳಿತದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಮೇಲಿನ ಕುರುವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 5,200 ಮತದಾರರಿದ್ದು, ಅಂದಾಜು 7.5 ಲಕ್ಷ ಜನಸಂಖ್ಯೆ ಹೊಂದಿದೆ. 800ಕ್ಕೂ ಹೆಚ್ಚು ಬೀದಿ ದೀಪಗಳು, 2 ನೀರು ಶುದ್ರೀಕರಣ ಘಟಕ, 32 ಮೋಟರ್‌, 1,250ಕ್ಕೂ ಹೆಚ್ಚು ನಲ್ಲಿ ಸಂಪರ್ಕ, ಅತಿ ಹೆಚ್ಚು ಬೀದಿ ನಲ್ಲಿ ಸಂಪರ್ಕ ಹೊಂದಿದೆ. ಪ್ರತಿ ತಿಂಗಳು ಸುಮಾರು ₹ 2.5 ಲಕ್ಷದಿಂದ ₹ 3 ಲಕ್ಷದಷ್ಟು ವಿದ್ಯುತ್ ಬಿಲ್‌ ಪಾವತಿಸಬೇಕು. 4 ವರ್ಷಗಳಿಂದ ಈವರೆಗೆ ಸುಮಾರು
₹ 42 ಲಕ್ಷ ಬಾಕಿ ಉಳಿಸಿಕೊಂಡಿದೆ.

ADVERTISEMENT

ಮುಳುಬಾಗಿಲು ಪಂಚಾಯಿತಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 400ಕ್ಕೂ ಹೆಚ್ಚು ಬೀದಿದೀಪ, 1 ಸಾವಿರಕ್ಕೂ ಹೆಚ್ಚು ನಲ್ಲಿ ಸಂಪರ್ಕ, 6 ಕುಡಿಯುವ ನೀರು ಪೂರೈಕೆ ಪಂಪ್ ಸೆಟ್‌ ಇವೆ. ಪ್ರತಿ ತಿಂಗಳು₹ 2 ಲಕ್ಷಕ್ಕೂ ಹೆಚ್ಚು ವಿದ್ಯುತ್‌ ಶುಲ್ಕ ಪಾವತಿಸಬೇಕಿದೆ. 3 ತಿಂಗಳುಗಳಿಂದ ಸುಮಾರು ₹ 7.5 ಲಕ್ಷ ಬಿಲ್‌ ಬಾಕಿ ಇದೆ.

ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಈ ಅವಳಿ ಪಂಚಾಯಿತಿಯಲ್ಲಿ ಕಡಿಮೆ ದರದಲ್ಲಿ ಮನೆ ಲಭ್ಯವಿದೆ. ಅತಿ ಹೆಚ್ಚು ಜನರು ವಾಸವಾಗಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ನೀಡುತ್ತಿದ್ದೇವೆ. ಕಳೆದ ತಿಂಗಳು ₹ 17 ಲಕ್ಷ ಬಿಲ್‌ ಪಾವತಿಸಿದ್ದೇವೆ. ಪಂಚಾಯಿತಿಗೆ ಆದಾಯ ಲಭ್ಯವಾಗುತ್ತಿಲ್ಲ. ಸರ್ಕಾರದಿಂದ ಮರಳು ರಾಜಧನ ₹ 32 ಲಕ್ಷ ಬಾಕಿ ಇದೆ. 15ನೇ ಹಣಕಾಸು, ವರ್ಗ 1ರ ಅನುದಾನ ಅಭಿವೃದ್ಧಿಗೆ ಸಾಲುತ್ತಿಲ್ಲ. ಮಳಿಗೆ ಹರಾಜು ಕೇಸು ಕೋರ್ಟ್‌ನಲ್ಲಿದ್ದು ಹಣ ಸಂದಾಯವಾಗಿಲ್ಲ. ಸರ್ಕಾರ ಕುಂಸಿ ಪಂಚಾಯಿತಿಗೆ ಒದಗಿಸಿದಂತೆ ಇಲ್ಲಿಯೂ ವಿಶೇಷ ಸೌಲಭ್ಯ, ಅನುದಾನ ನೀಡಬೇಕು’ ಎಂದುಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಿಶ್ಚಲ್‌ ಜಾದೂಗಾರ್‌ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.