ADVERTISEMENT

ರಾಜ್ಯದಲ್ಲಿಯೇ ಹೆಚ್ಚು ಹಕ್ಕುಪತ್ರ ವಿತರಣೆ

ಕೆರೆಕೊಪ್ಪದಿಂದ ಉಳವಿ-ಹೊಸಬಾಳೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:43 IST
Last Updated 26 ಜನವರಿ 2018, 10:43 IST
ಸೊರಬ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿಗುರುವಾರ ಕೆರೆಕೊಪ್ಪದಿಂದ ಉಳವಿ- ಹೊಸಬಾಳೆ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಮಧು ಬಂಗಾರಪ್ಪ ನೆರವೇರಿಸಿದರು.
ಸೊರಬ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿಗುರುವಾರ ಕೆರೆಕೊಪ್ಪದಿಂದ ಉಳವಿ- ಹೊಸಬಾಳೆ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಮಧು ಬಂಗಾರಪ್ಪ ನೆರವೇರಿಸಿದರು.   

ಸೊರಬ: ಕುಮಾರ್ ಬಂಗಾರಪ್ಪ ರಾಜ್ಯ ಸರ್ಕಾರದ ವಿರುದ್ಧ ದೋಷಾರೋಪ ಪಟ್ಟಿ ಬಿಡುಗಡೆ ಮಾಡುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಖಾತೆಗೆ ಏಕೆ ಹಣ ಜಮೆ ಮಾಡಲಿಲ್ಲ ಎನ್ನುವುದನ್ನು ಪ್ರಶ್ನಿಸಲಿ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ಗುರುವಾರ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಕೆರೆಕೊಪ್ಪದಿಂದ ಉಳವಿ-ಹೊಸಬಾಳೆ ಮುಖ್ಯರಸ್ತೆವರೆಗೆ ₹ 74.50 ಲಕ್ಷ ವೆಚ್ಚದಲ್ಲಿ 2 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಡವರ ಖಾತೆಗೆ ಶ್ರೀಮಂತರು ಅಕ್ರಮವಾಗಿ ಕೂಡಿಟ್ಟ ಕಪ್ಪುಹಣವನ್ನು ಜಮೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತು ಕೊಟ್ಟಿದ್ದರು. ಕುಮಾರ್ ಬಂಗಾರಪ್ಪ ಅವರು ಮೊದಲು ‘ಪ್ರಧಾನಿ ಅವರಿಗೆ ಬಡವರ ಖಾತೆಗೆ ಹಣವನ್ನು ಜಮೆ ಮಾಡುವುದನ್ನು ತಿಳಿಸಲಿ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನನ್ನನ್ನು ಸದ್ದಾಂ ಹುಸೇನ್ ಎಂದು ಮೂದಲಿಸಿದ ಮಾಜಿ ಸಚಿವ ಎಚ್.ಹಾಲಪ್ಪ ಹಾಗೂ ದಂಡಾವತಿ ಯೋಜನೆಯನ್ನು ಅಂದು ವಿರೋಧಿಸಿ ಇಂದು ಯೋಜನೆಯನ್ನು ಬೆಂಬಲಿಸಲು ಮುಂದಾಗಿರುವ ದಾರಿ ತಪ್ಪಿದ ಮಗ ಕುಮಾರ್ ಬಂಗಾರಪ್ಪ ಅವರನ್ನು ಕ್ಷೇತ್ರದ ಜನತೆ ಒಕ್ಕೊರಲಿನಿಂದ ಪ್ರಶ್ನಿಸಲು ಮುಂದಾಗಬೇಕು. ತಾವು ಮಾಡಿದ ಪಾದಯಾತ್ರೆಯನ್ನು ಶೋಕಿಗೆ ಮಾಡಿದ್ದೇನೆ ಎಂದು ಟೀಕಿಸುವ ಇವರು ಗೆದ್ದು ಸೋತು ದುರಹಂಕಾರದ ಮಾತಗಳನ್ನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯದಲ್ಲಿಯೇ ತಾವು ಅತಿಹೆಚ್ಚು ಹಕ್ಕುಪತ್ರಗಳನ್ನು ವಿತರಿಸುವುದಕ್ಕೆ ಜಿಲ್ಲಾ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಸಹಕಾರದಿಂದಲೇ ಸಾಧ್ಯವಾಯಿತು ಎಂದು ಹೇಳಿದರು.

‘ಬಿಜೆಪಿ ಮುಖಂಡ ಶ್ರೀಪಾದ ಹೆಗಡೆ ತಾಲ್ಲೂಕಿನ ತಲಕಾಲುಕೊಪ್ಪ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ನಿಸರಾಣಿ ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣಪ್ಪ ಪ್ರಾಸ್ತಾವಿಕ ಮಾತನಾಡಿದರು. ನಿಸರಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ನಾರಾಯಣಪ್ಪ, ಸದಸ್ಯರಾದ ಬಿ.ಎಲ್.ಗೋಪಾಲ್, ಎಪಿಎಂಸಿ ಸದಸ್ಯರಾದ ಅಜ್ಜಪ್ಪ, ಶಾಂತಮ್ಮ, ಕೆ.ವಿ.ಗೌಡ, ಪ್ರಭಾಕರ್, ಸುರೇಂದ್ರಪ್ಪ, ಕೆ.ವಿ.ನರಹರಿ, ಶಿವಕುಮಾರ್, ಹುಚ್ಚಪ್ಪ ಕ್ಯಾಸನೂರು, ಭಾಸ್ಕರ್ ಉಳವಿ, ನಾಗೇಶ್ ಭಟ್, ಬೈರಪ್ಪ, ಬಿ.ಗೋಪಾಲ್, ರಾಮಣ್ಣ, ಪಿಡಿಒ ಎಂ.ಸುಭಾಷ್, ಲಕ್ಷ್ಮೀನಾರಾಯಣ್, ಕೆರಿಯಪ್ಪ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.