ADVERTISEMENT

ಅಡೆತಡೆ ಇಲ್ಲದೇ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ !

ಶಿವಾನಂದ ಕರ್ಕಿ
Published 1 ಫೆಬ್ರುವರಿ 2018, 7:06 IST
Last Updated 1 ಫೆಬ್ರುವರಿ 2018, 7:06 IST
ತೀರ್ಥಹಳ್ಳಿ ತಾಲ್ಲೂಕಿನ ಬುಕ್ಲಾಪುರ ಮರಳು ಕ್ವಾರೆ.
ತೀರ್ಥಹಳ್ಳಿ ತಾಲ್ಲೂಕಿನ ಬುಕ್ಲಾಪುರ ಮರಳು ಕ್ವಾರೆ.   

ತೀರ್ಥಹಳ್ಳಿ:ಸಾರ್ವಜನಿಕರಿಗೆ ಮರಳು ಕನ್ನಡಿಯೊಳಗಿನ ಗಂಟಾಗಿದೆ. ಮರಳು ದಂಧೆಕೋರರಿಗೆ ಮರಳು ಸುಲಭವಾಗಿ ಸಿಗುತ್ತಿದ್ದು ಅಕ್ರಮ ಮರಳು ಸಾಗಾಟ ಯಾವುದೇ ಅಡೆತಡೆ ಇಲ್ಲದೇ ನಿರಂತರವಾಗಿ ನಡೆಯುತ್ತಿದೆ !

ಸಾರ್ವಜನಿಕರ ಬಳಕೆಗೆ ಮರಳು ಸಿಗದೆ ಪರದಾಟ ನಡೆಸುತ್ತಿರುವ ಸಂದರ್ಭದಲ್ಲಿ ಮರಳಿನ ವಹಿವಾಟು ಹಣ, ತೋಳ್ಬಲ, ರಾಜಕೀಯ ಪ್ರಭಾವಕ್ಕೆ ಸಿಕ್ಕು ಲೂಟಿಯಾಗುತ್ತಿದೆ. ಜಿಲ್ಲಾ, ತಾಲ್ಲೂಕು ಆಡಳಿತ ಸಾರ್ವಜನಿಕರ ಮರಳು ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದೇ ಅಸಹಾಯಕತೆ ತೋರುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.

ಕಳೆದ ವರ್ಷದ ಏಪ್ರಿಲ್‌ನಿಂದ ಇದುವರೆಗೆ ಮರಳಿನ ಬಾಬ್ತು ಸರ್ಕಾರದ ಬೊಕ್ಕಸಕ್ಕೆ ಸೇರಿದ ಆದಾಯ ಕೇವಲ ₹ 2 ಕೋಟಿ 36 ಲಕ್ಷ ಮಾತ್ರ. ಅಡ್ಡದಾರಿಯಲ್ಲಿ ಕೋಟ್ಯಾಂತರ ರೂಪಾಯಿ ಮರಳು ಮಾಫಿಯಾದ ವಶವಾಗಿದ್ದು ಕಾನೂನು ಕ್ರಮ ತೆಗೆದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

2016ರ ಮರಳು ಗುತ್ತಿಗೆ ಮಾರಾಟ ನೀತಿ ಜಾರಿಯ ಹೊಣೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದೆ. ಆದರೆ, ಮರಳು ಕ್ವಾರೆಯಲ್ಲಿ ಬಿಗಿ ನಿಲುವು ಕಾರ್ಯರೂಪಕ್ಕೆ ಬರದ ಕಾರಣ ಕೋಟ್ಯಾಂತರ ಬೆಲೆಯ ಮರಳು ಸರ್ಕಾರದ ಬೊಕ್ಕಸಕ್ಕೆ ಜಮೆಯಾಗದೇ ಕೈತಪ್ಪಿ ಹೋಗುವಂತಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ 2014ರ ಪೂರ್ವದಲ್ಲಿ 58 ಮರಳು ಕ್ವಾರೆಗಳಿದ್ದು ಕಸ್ತೂರಿ ರಂಗನ್‌ ವರದಿ ಸಿಫಾರಸ್ಸಿನ ನಂತರ 37ಕ್ಕೆ ಕುಸಿದಿದೆ. ಮೊದಲ ಹಂತದಲ್ಲಿ ಹರಾಜಾದ 10 ಕ್ವಾರೆಗಳ ಪೈಕಿ 2 ಕ್ವಾರೆ ಗುತ್ತಿಗೆ ಚಾಲ್ತಿಯಲ್ಲಿದೆ. 5 ಕ್ವಾರೆ ಗುತ್ತಿಗೆ ಬಾಬ್ತು ಇನ್ನೂ ಸರ್ಕಾಕ್ಕೆ ಹಣ ಸಂದಾಯವಾಗಿಲ್ಲ. ಷರತ್ತು ಉಲ್ಲಂಘನೆ ಕಾರಣಕ್ಕೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕೈಬಿಡಲಾಗಿದೆ.

ಸರ್ಕಾರಿ ಕಾಮಗಾರಿಗೆ ಮರಳು ಪೂರೈಸಲು ಮೀಸಲಿಟ್ಟ 2 ಕ್ವಾರೆ ಆರಂಭಕ್ಕೆ ನೆಪ ಹೇಳಲಾಗುತ್ತಿದೆ. 27 ಕ್ವಾರೆ ಹರಾಜು ಕುರಿತು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಕೆಯಾಗಿದ್ದು ವಿವಾದ ಇತ್ಯರ್ಥಗೊಂಡಿಲ್ಲ.

ಅರ್ಜಿ ಶುಲ್ಕದ ಬಾಬ್ತು ₹ 9 ಲಕ್ಷ 85 ಸಾವಿರ, ಪರ್ಮಿಟ್‌ ಬಾಬ್ತು ₹ 18 ಲಕ್ಷ 09 ಸಾವಿರದ 300, ಗುತ್ತಿಗೆ ಮೊತ್ತ ₹ 2 ಕೋಟಿ 84 ಲಕ್ಷದ 6 ಸಾವಿರದ 750, 85 ವಾಹನಗಳಿಗೆ ದಂಡ ವಿಧಿಸಲಾಗಿದ್ದು ಅಧಿಕ ಪ್ರಮಾಣದ ಮರಳು ಸಾಗಣೆ ಬಾಬ್ತು ₹ 4 ಲಕ್ಷ 78 ಸಾವಿರ ಹಣ ಸಂಗ್ರಹವಾಗಿದೆ. ಆದರೆ, ನೂರಾರು ಕೋಟಿ ಬೆಲೆಯ ಮರಳು ಲೂಟಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿರುವ ಬುಕ್ಲಾಪುರ ಕ್ವಾರೆ ಆರಂಭಕ್ಕೆ ಒಪ್ಪಂದದ ಅವಧಿ ಮುಗಿಯದ ಕಾರಣ ಅನುಮತಿ ದೊರೆತಿದ್ದು, ದಬ್ಬಣಗದ್ದೆ ಕ್ವಾರೆ ಆರಂಭಕ್ಕೆ ಅನುಮತಿ ಸಿಕ್ಕಿಲ್ಲ. ಪರಿಸರ ಮಂತ್ರಾಲಯದ ಅನುಮತಿ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಈ ಹಿಂದೆ 2 ಕ್ವಾರೆ ಸ್ಥಗಿತಗೊಂಡಿತ್ತು. ಒಂದು ಕ್ವಾರೆಗೆ ಅನುಮತಿ ನೀಡಿ ಇನ್ನೊಂದನ್ನು ತಡೆಹಿಡಿದಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.

2012ರಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 586 ಎಕರೆ ಮರಳು ಸಂಗ್ರಹದ ವಿಸ್ತೀರ್ಣ ಪ್ರದೇಶವನ್ನು ಗುರುತಿಸಲಾಗಿತ್ತು. ಕಸ್ತೂರಿ ರಂಗನ್‌ ವರದಿ, ಅರಣ್ಯ ಇಲಾಖೆ ಆಕ್ಷೇಪಣೆಯ ಹಿನ್ನಲೆಯಲ್ಲಿ ಸುಮಾರು 300 ಎಕರೆ ಪ್ರದೇಶವನ್ನು ಕೈಬಿಡಲಾಗಿದೆ. ನಿಷೇಧಿತ ಪ್ರದೇಶವನ್ನು ಒಳಗೊಂಡಂತೆ ಅಧಿಕೃತ ಮರಳು ಕ್ವಾರೆಗಳಲ್ಲಿಯೂ ಮರಳು ಅಕ್ರಮ ಸಾಗಾಟ ನಿರಂತರವಾಗಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.