ADVERTISEMENT

ಶಿವಮೊಗ್ಗ: ಅಕ್ಕನ ವ್ಯಕ್ತಿತ್ವಕ್ಕೆ ಸುಂದರ ಚೌಕಟ್ಟು: ರಾಜೇಂದ್ರ ಚೆನ್ನಿ

ಡಾ.ಎಚ್.ಎಸ್ ಅನುಪಮಾ ಅವರ ‘ಬೆಳಗಿನೊಳಗು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:47 IST
Last Updated 29 ಜನವರಿ 2023, 5:47 IST
ಶಿವಮೊಗ್ಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ 'ಬೆಳಗಿನೊಳಗು' ಕೃತಿ ಬಿಡುಗಡೆ ಮಾಡಲಾಯಿತು
ಶಿವಮೊಗ್ಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ 'ಬೆಳಗಿನೊಳಗು' ಕೃತಿ ಬಿಡುಗಡೆ ಮಾಡಲಾಯಿತು   

ಶಿವಮೊಗ್ಗ: ‘ವಚನಗಾರ್ತಿ ಅಕ್ಕ ಮಹಾದೇವಿ ಅವರ ವ್ಯಕ್ತಿತ್ವಕ್ಕೆ ಲೇಖಕಿ ಡಾ. ಎಚ್.ಎಸ್ ಅನುಪಮಾ ಅವರು ಒಂದು ಸುಂದರವಾದ ಚೌಕಟ್ಟು ಕಟ್ಟಿಕೊಟ್ಟಿದ್ದಾರೆ’ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಇಲ್ಲಿನ ಕಮಲಾ ನೆಹರೂ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ಬಹುಮುಖಿ- ಶಿವಮೊಗ್ಗ ಮತ್ತು ಲಡಾಯಿ ಪ್ರಕಾಶನ ಆಶ್ರಯದಲ್ಲಿ ಡಾ.ಎಚ್.ಎಸ್ ಅನುಪಮಾ ಅವರ ‘ಬೆಳಗಿನೊಳಗು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಲೇಖಕರು ವಾಸ್ತವದ ಚಿತ್ರಣ ಹಾಗೂ ಚರಿತ್ರೆಯನ್ನು ಮರು ರೂಪಿಸಿರುವುದು ಕೃತಿಯ ಮೆರುಗಿಗೆ ಕಾರಣವಾಗಿದೆ. ಬೆಳಗಿನೊಳಗು ಮಹಾದೇವಿಯಕ್ಕ ಕಾದಂಬರಿಯಲ್ಲಿ ನವೋದಯದ ಎಲ್ಲಾ ಸತ್ವವು ಅಡಕವಾಗಿದೆ ಎಂದರು.

ADVERTISEMENT

ಅಕ್ಕ ತಮ್ಮೊಳಗೆ ಕೇಳಿಕೊಂಡ ಆಧ್ಯಾತ್ಮಿಕ, ತಾತ್ವಿಕ ಸಾಮಾಜಿಕ ಪ್ರಶ್ನೆಯನ್ನು ಅನುಪಮಾ ಅವರು ಎಳೆ ಎಳೆಯಾಗಿ ಹಿಡಿದಿಟ್ಟಿದ್ದಾರೆ. ಉಡುತಡಿಯ ಮಹಾದೇವಿ ತನ್ನ ಸ್ವಂತಿಕೆಯಿಂದ, ಪರಿಶ್ರಮದಿಂದ ಮಹಾದೇವಿಯಕ್ಕಳಾಗಿ ಬೆಳಗಿದ ಪಯಣವನ್ನು ಈ ಕೃತಿ ಕಟ್ಟಿಕೊಡುತ್ತದೆ ಎಂದರು.

‘ಸ್ತ್ರೀಯಾಗಿ ಸಾಧನೆ ಮಾಡಲು ಯಾವುದೇ ಮಿತಿ ಇಲ್ಲ. ಆ ಎಲ್ಲಾ ತಡೆ ರಹಿತ ಪಯಣವನ್ನು ಅಕ್ಕನ ವ್ಯಕ್ತಿತ್ವದ ಮೂಲಕ ಈ
ಕೃತಿಯಲ್ಲಿ ಕಾಣಬಹುದು. ಭಾಷೆ ಮತ್ತು ವಿಚಾರಗಳು ಸರಳವಾಗಿ, ಪರಿಸರ ಮತ್ತು ಕಾಲಕ್ಕೆ ಹೊಂದುವಂತೆ ಪೋಣಿಸಲಾಗಿದೆ’ ಎಂದು ಲೇಖಕಿ ಎಲ್.ಸಿ. ಸುಮಿತ್ರಾ ಹೇಳಿದರು.

ಬಳ್ಳಿಗಾವಿ ಹಾಗೂ ಉಡುತಡಿಯ ಗ್ರಾಮ್ಯಭಾಷೆ ಕಾದಂಬರಿ ಒಳಗೊಂಡಿದ್ದು, ಓದಲು ಚೈತನ್ಯ ತುಂಬುತ್ತದೆ. ಬೆಳೆಯುತ್ತಲೇ ಪ್ರಶ್ನೆ ಕೇಳುವ ಗುಣ ಅಕ್ಕ ಮಹಾದೇವಿ ಬೆಳೆಸಿಕೊಂಡಿದ್ದು, 12 ನೇ ಶತಮಾನದ ಚಾರಿತ್ರಿಕ ಸಂಗತಿಯನ್ನು ಜನಪದ, ಬೀಸುವ ಹಾಡು, ಗಾದೆಗಳು ಎಲ್ಲವನ್ನೂ ಸಹ ಲೇಖಕರು ಅಚ್ಚುಕಟ್ಟಾಗಿ ಸಂಗ್ರಹಿಸಿ ಕೃತಿಯಲ್ಲಿ ಪೋಣಿಸಿದ್ದಾರೆ ಎಂದರು.

ಲೇಖಕಿ ಎಚ್.ಎಸ್ ಅನುಪಮಾ, ಡಾ. ಪ್ರಕಾಶ್ ಮರಗನಹಳ್ಳಿ, ಕೃತಿ ಪರಪ್ಪೆಮನೆ, ಡಾ. ಅನ್ನಪೂರ್ಣ, ಆರಡಿ ಮಲ್ಲಯ್ಯ, ಪ್ರೊ.ಕಿರಣ್ ದೇಸಾಯಿ, ಪುಟ್ಟಯ್ಯ, ನಾಗಭೂಷಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.