ADVERTISEMENT

ಹರೇಕಳ ಹಾಜಬ್ಬ ಸನ್ಮಾನ ಸಮಾರಂಭದಲ್ಲಿ ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 4:49 IST
Last Updated 6 ಜನವರಿ 2022, 4:49 IST
ತೀರ್ಥಹಳ್ಳಿಯ ಬಂಟರ ಭವನದಲ್ಲಿ ಬುಧವಾರ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ತೀರ್ಥಹಳ್ಳಿಯ ಬಂಟರ ಭವನದಲ್ಲಿ ಬುಧವಾರ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.   

ತೀರ್ಥಹಳ್ಳಿ: ಪದವಿ, ಪ್ರಶಸ್ತಿಗಳು ಮಾರಾಟದ ವಸ್ತುವಾಗಿದೆ. ಹಸಿವು ಬಚ್ಚಿಟ್ಟು ಶಾಲೆಗಾಗಿ ಹಣ ಕ್ರೋಢಿಕರಿಸಿ ಜ್ಞಾನ ಪಸರಿಸುವ ಯೋಚನೆ ಅದ್ಭುತ. ಇಂತಹ ಆಲೋಚನೆಯ ಮೂಲಕ ನೂರಾರು ಮಕ್ಕಳ ಆಶಾಕಿರಣವಾದ ಹರೇಕಳ ಹಾಜಬ್ಬ ನಿಜವಾದ ಸಂತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಬುಧವಾರ ಪಟ್ಟಣದ ಬಂಟರ ಭವನದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ತಾಲ್ಲೂಕು ನಾಗರಿಕ ಸನ್ಮಾನ ಸಮಿತಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಶಸ್ತಿಗೆ ಭಾಜನರಾದ ವ್ಯಕ್ತಿ ಪ್ರಲೋಭನೆಗೆ ಒಳಗಾಗುವ ಕುಲಗೆಟ್ಟ ಕಾಲದಲ್ಲಿ ಸ್ವಂತಕ್ಕೆ ಏನು ಮಾಡಿಕೊಳ್ಳದೇ ಮತ್ತಷ್ಟು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಅಕ್ಷರ ಸಂತ ಹಾಜಬ್ಬ ಸಾಧನೆ ನಾಲ್ಕು ವಿಶ್ವವಿದ್ಯಾಲಯದ ಪಠ್ಯಗಳಾಗಿ ಪ್ರಕಟಗೊಂಡಿದೆ. ಅಲ್ಪಹಣದಲ್ಲಿ ಶಾಲೆ ಕಟ್ಟಿರುವ ಸಾಧನೆ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಇಂದು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಮೂರು ಚಕ್ರಗಳು ಹಾಳಾಗಿದೆ. ಸಮಾಜಕ್ಕಾಗಿ ಕೊಡುವ ಭಾವ ಪ್ರಜ್ವಲಿಸಬೇಕು. ಬೇರೆಯವರ ಹಸಿವು ಬದಲಾವಣೆಗೆ ಸ್ಫೂರ್ತಿ ನೀಡಬೇಕು. ತಾಲ್ಲೂಕು ಸಾತ್ವಿಕ ರಾಜಕಾರಣಿಗಳು, ಪ್ರಬುದ್ಧ ಸಾಹಿತಿಗಳನ್ನು ನೀಡಿದೆ. ಆ ಪರಂಪರೆ ಮುಂದುವರಿಯಬೇಕು’ ಎಂದು ಸಲಹೆ ನೀಡಿದರು.

ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ‘ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರೂ ಬದಲಾಗದ ವ್ಯಕ್ತಿತ್ವ ಹಾಜಬ್ಬ ಅವರದು. ತೀರ್ಥಹಳ್ಳಿಗೆ ಬಂದು ಕುವೆಂಪು ಮನೆ ನೋಡುವ ಹಂಬಲ ಬೆಳೆಸಿಕೊಂಡಿರುವ ಹಾಜಬ್ಬ ಅವರ ಸಾಧನೆ ಅನುಕರಣೀಯ. ಮಾನವ ದೇವಮಾನವ ಆಗುವುದಾ
ದರೆ ಅದು ಹೀಗೆ ಆಗಬೇಕು’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.‌ ಅಬ್ದುಲ್‌ ರೆಹಮಾನ್‌, ಕಾಶಿ ಶೇಷಾದ್ರಿ ದೀಕ್ಷಿತ್‌, ಅಬುಬಕರ್‌ ಸಿದ್ದಿಕ್ಕಿ ತಂಗಳ್ ಮಾತನಾಡಿದರು.

ಪತ್ರಕರ್ತ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾದ್ವಿ ಪ್ರಭು, ನಿಧಿ ಸುರೇಶ್‌ ಪ್ರಾರ್ಥಿಸಿದರು. ಹಕೀಮ್‌ ಸ್ವಾಗತಿಸಿದರು.

‘ಶಾಲೆಯ ಅಧ್ಯಕ್ಷ ಆಗದಿದ್ದರೆ ಸಾಧನೆ ಆಗುತ್ತಿರಲಿಲ್ಲ’

‘ಮನೆಯ ಬಡತನವನ್ನು ಬದಿಗೊತ್ತಿ ಶಾಲೆ ಕಟ್ಟುವುದಕ್ಕೆ ಕಷ್ಟಪಟ್ಟಿದ್ದೇನೆ. ಆರು ವರ್ಷಗಳ ಸತತ ಪ್ರಯತ್ನದಿಂದ 2000ರ ಜೂನ್‌ನಲ್ಲಿ ಶಾಲೆ ಆರಂಭಿಸಿದೆ. ಶಾಲೆಗೆ ಮೊದಲು ಶಾಲಾಭಿವೃದ್ಧಿ ಅಧ್ಯಕ್ಷನಾಗಿ ನೇಮಕವಾದೆ. ಅಲ್ಲಿಂದ ನನ್ನ ಜವಾಬ್ದಾರಿ ಹೆಚ್ಚಾಯ್ತು. ಅಂದು ಶಾಲೆಯ ಅಧ್ಯಕ್ಷ ಆಗದಿದ್ದರೆ ಹರೇಕಳ ಹಾಜಬ್ಬ ಹೀಗೆ ನಿಮ್ಮ ಮುಂದೆ ಇರುತ್ತಿರಲಿಲ್ಲ. ನನ್ನ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಠ್ಯ ಇರುವುದು ತಿಳಿದಿರಲಿಲ್ಲ. ಪಠ್ಯ ಪುಸ್ತಕಕ್ಕೆ ಸೇರಿಸಿದ ಅಂಜನಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹರೇಕಳ ಹಾಜಬ್ಬ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.