ADVERTISEMENT

ಶರಾವತಿ ಭೂಗತ ವಿದ್ಯುತ್ ಯೋಜನೆ ಕೈಬಿಡಿ : ಡಿ.ಎಸ್.ಅರುಣ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 16:16 IST
Last Updated 18 ಮಾರ್ಚ್ 2025, 16:16 IST
ಡಿ.ಎಸ್.ಅರುಣ್
ಡಿ.ಎಸ್.ಅರುಣ್   

ಶಿವಮೊಗ್ಗ: ರಾಜ್ಯ ಸರ್ಕಾರ ಕೈಗೆತ್ತಿಗೊಳ್ಳುತ್ತಿರುವ ಶರಾವತಿ ಭೂಗತ (ಪಂಪ್ಡ್ ಸ್ಟೋರೇಜ್) ವಿದ್ಯುತ್ ಯೋಜನೆಯಿಂದ  ಸುಮಾರು 350 ಎಕರೆ ಪಶ್ಚಿಮಘಟ್ಟದ ಅರಣ್ಯ ನಾಶ ಆಗಲಿದೆ ಎಂದು ವಿಧಾನಪರಿಷತ್‌ ಸದಸ್ಯ ಡಿ.ಎಸ್.ಅರುಣ್ ಸರ್ಕಾರದ ಗಮನ ಸೆಳೆದರು.

ವಿಧಾನಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ‘ಯೋಜನೆಯಿಂದ ಶರಾವತಿ ಅಭಯಾರಣ್ಯದಲ್ಲಿನ ಸಸ್ಯ ಸಂಪತ್ತು, ವಿವಿಧ ಪ್ರಭೇದಗಳು, ಅಳಿವಿನ ಅಂಚಿನ ಪ್ರಾಣಿಗಳಿಗೂ ಕುತ್ತು ಬರಲಿದೆ. ಅಲ್ಲದೇ ಈ ಯೋಜನೆಗೆ ವ್ಯಾಪಕ ವಿರೋಧವೂ ಇದೆ’ ಎಂದರು.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪಕ್ಕದ ತಮಿಳುನಾಡಿನ ರಾಜ್ಯ ಸರ್ಕಾರ ಬೇಡಿಕೆ ಸಮಯದಲ್ಲಿ ಬೇಕಾಗುವ ವಿದ್ಯುತ್ ಅನ್ನು ಸಂಗ್ರಹಿಸಿಟ್ಟು ಸರಬರಾಜು ಮಾಡಲು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್‌ಎಸ್) ಯೋಜನೆ ರೂಪಿಸಿದೆ.  ಕೇಂದ್ರದ ಇಂಧನ ಇಲಾಖೆ ಇದಕ್ಕೆ ಶೇ 30ರಷ್ಟು ಧನ ಸಹಾಯ ಮಾಡುತ್ತಿದೆ ಎಂಬ ಮಾಹಿತಿಯನ್ನು ಗಮನಕ್ಕೆ ತಂದರು.

ADVERTISEMENT

ಈ ಯೋಜನೆಯು ಸೌರಶಕ್ತಿ ಮತ್ತು ಗಾಳಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ 500 ಮೆಗಾ ವಾಟ್‌ನಿಂದ 1000 ಮೆಗಾ ವಾಟ್‌ ಸಾಮರ್ಥ್ಯದ ಬ್ಯಾಟರಿಗಳನ್ನು ವಿವಿಧ ಸಂಗ್ರಹ ಘಟಕಗಳಲ್ಲಿ ಶೇಖರಿಸಿ, ಹೆಚ್ಚು ಬೇಡಿಕೆ ಸಮಯದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ವಿದ್ಯುತ್ ಖರೀದಿ ವೆಚ್ಚ ಉಳಿತಾಯವಾಗುತ್ತದೆ ಎಂದು ವಿವರಿಸಿದರು.

ಪರಿಸರ ಹಾಗೂ ವನ್ಯಜೀವಿ ನೆಲೆ ನಾಶ ಮಾಡದೇ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅಳವಡಿಸುವ ಈ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವರನ್ನು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗೆ ಸರ್ಕಾರದಿಂದ ಪೂರಕ ಉತ್ತರ ಒದಗಿಸಲಾಗುವುದು ಎಂದು ಸಭಾನಾಯಕ ಬೋಸರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.