ADVERTISEMENT

ಪ್ರಧಾನಮಂತ್ರಿ ಆದರ್ಶ ಗ್ರಾಮಗಳ ಅಭಿವೃದ್ಧಿಗೆ ವೇಗ

ವಾರದ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಜಿಲ್ಲಾಡಳಿತ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 1:25 IST
Last Updated 19 ಆಗಸ್ಟ್ 2021, 1:25 IST
ಕೆ.ಬಿ. ಶಿವಕುಮಾರ್
ಕೆ.ಬಿ. ಶಿವಕುಮಾರ್   

ಶಿವಮೊಗ್ಗ: ಪ್ರಧಾನಮಂತ್ರಿ ಆದರ್ಶ ಗ್ರಾಮಗಳ ಅಭಿವೃದ್ಧಿಗೆ ಸರ್ವೆ ಕಾರ್ಯ ಕೈಗೊಳ್ಳಲು ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಆಯ್ಕೆಯಾದ ಗ್ರಾಮಗಳಲ್ಲಿ ಅವಶ್ಯವಿರುವ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ತಕ್ಷಣ ಅನುಮೋದನೆ ಪಡೆಯಬೇಕು. ಕೆಲಸ ಆರಂಭಿಸಬೇಕು. ಮುಂದಿನ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳು ವಂತೆ ಕ್ರಮ ವಹಿಸಬೇಕು ಎಂದರು.

ADVERTISEMENT

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಪರಿಶಿಷ್ಟರ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪ್ರತಿ ಗ್ರಾಮಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಅಭಿವೃದ್ಧಿಗಾಗಿ ₹ 40 ಲಕ್ಷ , ಆಡಳಿತಾತ್ಮಕ ವೆಚ್ಚವಾಗಿ ₹ 60 ಸಾವಿರ ನೀಡುತ್ತವೆ. ಬಿಡುಗಡೆಯಾದ ಅನುದಾನ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳು, ರಾಜ್ಯ ಯೋಜನೆಗಳ ಇತರೆ ಅನುದಾನ ಬಳಸಿಕೊಂಡು ಗ್ರಾಮಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

2020–21ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ಅಡಿ ಜಿಲ್ಲೆಯ 33 ಗ್ರಾಮ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿ 1 ಗ್ರಾಮ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮೂಲಸೌಕರ್ಯ ಅಭಿವೃದ್ಧಿ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಶಾಲೆ ಮತ್ತು ಅಂಗನವಾಡಿ ಕಟ್ಟಗಳು, ಶೌಚಾಲಯ ನಿರ್ಮಾಣ, ದುರಸ್ತಿ, ರಸ್ತೆಗಳು, ಸೋಲಾರ್ ದೀಪ, ಬೀದಿ ದೀಪ ಅಳವಡಿಕೆ ಆದ್ಯತೆ ನೀಡಲಾಗುವುದು. ಕ್ರಿಯಾ ಯೋಜನೆಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ನಂತರ ಜಿಲ್ಲಾ ಮಟ್ಟದ ಸಮಿತಿ (ಡಿಎಲ್‍ಸಿಸಿ) ಅನುಮೋದನೆ ಪಡೆಯಬೇಕು. ವಾರದ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಪಿಡಿಒ ಹಾಗೂ ಇತರೆ ಅಧಿಕಾರಿಗಳು ಜವಾಬ್ದಾರಿ ಹೊರಬೇಕು ಎಂದು ಸೂಚಿಸಿದರು.

ಕೋವಿಡ್ ಕಾರಣ 2019–20ನೇ ಸಾಲಿಗೆ ಆಯ್ಕೆಯಾದ ಗ್ರಾಮಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಬೇಕು. ಗ್ರಾಮಗಳಲ್ಲಿ ಸರ್ವೆ ಕಾರ್ಯ ಕೈಗೊಂಡ ನಂತರ ಒಂದು ಗ್ರಾಮದ ಮಾದರಿ ಕ್ರಿಯಾ ಯೋಜನೆ ತೆಗೆದುಕೊಂಡು ಇತರೆ ಗ್ರಾಮಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ 2018–19ನೇ ಸಾಲಿನಿಂದ 2020–21ನೇ ಸಾಲಿನ ಪ್ರಗತಿಯ ವರದಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.