ADVERTISEMENT

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 3:33 IST
Last Updated 5 ನವೆಂಬರ್ 2022, 3:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಿವಮೊಗ್ಗ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಹೋದ ಪೊಲೀಸರ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಆರೋಪಿಯ ಕಾಲಿಗೆ ಇಲ್ಲಿನ ದೊಡ್ಡಪೇಟೆ ಠಾಣೆ ಸಬ್ ಇನ್ ಸ್ಪೆಕ್ಟರ್ ವಸಂತ್ ಶುಕ್ರವಾರ ತಡರಾತ್ರಿ ಗುಂಡು ಹೊಡೆದಿದ್ದಾರೆ.

ಇಲ್ಲಿನ ಕುಂಸಿ ಠಾಣೆ ಸಮೀಪದ ನಿವಾಸಿ ಅಸ್ಲಂ (20) ಪೊಲೀಸರ ಗುಂಡೇಟಿನಿಂದ ಗಾಯಗೊಂಡವನು.

ನಗರದಲ್ಲಿ ಐದು ದಿನಗಳ ಹಿಂದೆ ರಾತ್ರಿ ಅಶೋಕ್ ಪ್ರಭು ಎಂಬುವವರಿಗೆ ಇಲ್ಲಿನ ರಾಯಲ್ ಆರ್ಕಿಡ್ ಹೋಟೆಲ್ ಬಳಿ ಅಡ್ಡಹಾಕಿದ್ದ ನಾಲ್ವರು ಯುವಕರು ಅವರ ಮೇಲೆ ಹಲ್ಲೆ ನಡೆಸಿ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಶೋಕ್ ಪ್ರಭು ಪಕ್ಕದ ವಾಣಿಜ್ಯ ಸಂಕೀರ್ಣದೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಆ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶುಕ್ರವಾರ ಸಾಗರ ಪಟ್ಟಣದ ಹೊಸನಗರ ರಸ್ತೆ ನಿವಾಸಿ ಆಸಿಫ್(27) ಎಂಬುವನನ್ನು ಬಂಧಿಸಿದ್ದರು.

ಆಸಿಫ್ ನೀಡಿದ ಮಾಹಿತಿ ಆಧರಿಸಿ ಇಲ್ಲಿನ ಪುರಲೆ ಬಳಿಯ ನಿರ್ಮಾಣ ಹಂತದ ಲೇಔಟ್ ನಲ್ಲಿ ಬಚ್ಚಿಟ್ಟುಕೊಂಡಿದ್ದ ಅಸ್ಲಂನನ್ನು ಬಂಧಿಸಲು ತೆರಳಿದ್ದು, ಈ ವೇಳೆ ನಮ್ಮ ಸಿಬ್ಬಂದಿ ರಮೇಶ್ ಎಂಬುವವರ ಮೇಲೆ ಆತ ಚಾಕುವಿನಿಂದ ಹಲ್ಲೆ ಮಾಡಿ ಓಡಿ ಹೋಗಲು ಮುಂದಾಗಿದ್ದು, ಆಗ ಸಿಬ್ಬಂದಿಯ ರಕ್ಷಣೆಗೆ ಪಿಎಸ್ ಐ ವಸಂತ್ ಅಸ್ಳಂನ ಬಲಗಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ತಮದವರಿಗೆ ತಿಳಿಸಿದ್ದಾರೆ.

'ಗಾಯಾಳು ಅಸ್ಲಂನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಸ್ಲಂ ವಿರುದ್ಧ 9 ಪ್ರಕರಣ ದಾಖಲಾಗಿವೆ. ಅಸಿಫ್ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ' ಎಂದು ಎಸ್ಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.