ADVERTISEMENT

ಹೊರಗೆ ಬರುವ ಹೋಂ ಕ್ವಾರಂಟೈನ್‌ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಶಿಕಾರಿಪುರ ತಾಲ್ಲೂಕಿನ ಜನರಲ್ಲಿ ಆತಂಕ

ಎಚ್.ಎಸ್.ರಘು
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
   

ಶಿಕಾರಿಪುರ: ಕೋವಿಡ್‌–19 ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ಕೆಲ ವ್ಯಕ್ತಿಗಳು ಮನೆಯಿಂದ ಹೊರಗೆ ಬಂದು ಓಡಾಡುತ್ತಿರುವ ಘಟನೆಗಳು ನಡೆಯುತ್ತಿದ್ದು ಇದರಿಂದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಪುರಸಭೆ ಸಿಬ್ಬಂದಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್‌–19 ತಡೆಗಟ್ಟುವುದಕ್ಕಾಗಿ ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಪ್ರತಿ ಮನೆಗೆ ವಿವಿಧ ಇಲಾಖೆಗಳ ಸಿಬ್ಬಂದಿ ತೆರಳಿ ವಿದೇಶ, ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸಿ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ. ಮನೆ ಎದುರು ‘ಹೋಂ ಕ್ವಾರಂಟೈನ್‌ನಲ್ಲಿ ಇದ್ದೇವೆ, ಮನೆಗೆ ಭೇಟಿ ನೀಡದಿರಿ’ ಎಂಬ ಸೂಚನಾ ಪತ್ರವನ್ನು ಅಂಟಿಸುವ ಕೆಲಸ ಮಾಡಿದ್ದಾರೆ.

ADVERTISEMENT

ಮಾರ್ಚ್‌ 29ರವರೆಗೆ ಶಿಕಾರಿಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಹೊರಗಿನಿಂದ ಬಂದಿರುವ 6,567 ವ್ಯಕ್ತಿಗಳನ್ನು ಗುರುತಿಸಲಾಗಿದೆ. ಹೊರ ಜಿಲ್ಲೆಗಳಿಂದ ಬಂದ 5,843, ಹೊರ ರಾಜ್ಯದಿಂದ ಬಂದ 694 ಹಾಗೂ ವಿದೇಶದಿಂದ ಬಂದ 30 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದರೂ ಕೆಲವು ವ್ಯಕ್ತಿಗಳು ಮನೆಯಿಂದ ಹೊರಬಂದು ಓಡಾಡುತ್ತಿದ್ದಾರೆ. ಇವರು ಬಂದ ಕೂಡಲೇ ಜನರು ಆತಂಕಗೊಳ್ಳುತ್ತಿದ್ದಾರೆ. ಇವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.