ADVERTISEMENT

Santro Ravi | ಸ್ಯಾಂಟ್ರೊ ರವಿ ವಿರುದ್ಧ ಕ್ರಮ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 5:46 IST
Last Updated 10 ಜನವರಿ 2023, 5:46 IST
ಬಿ.ಎಸ್. ಯಡಿಯೂರಪ್ಪ 
ಬಿ.ಎಸ್. ಯಡಿಯೂರಪ್ಪ    

ಶಿವಮೊಗ್ಗ: ‘ಸ್ಯಾಂಟ್ರೊ ರವಿ ವಿಚಾರ ತಿಳಿದುಕೊಂಡಿದ್ದೇನೆ. ಮುಖ್ಯಮಂತ್ರಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸ್ಯಾಂಟ್ರೊ ರವಿ ಪ್ರಕರಣ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಗಿ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನ ಸರ್ಕಾರ ಮಾಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಸತ್ಯಾಸತ್ಯತೆ ತನಿಖೆಯಾದ ಬಳಿಕ ಹೊರಬರಲಿದೆ. ಯಾರೇ ಏನೇ ಹೇಳಬಹುದು. ಆದರೆ, ಆತನ ವಿರುದ್ಧ ಕ್ರಮ ಖಂಡಿತ’ ಎಂದರು.

ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದಲ್ಲಾ, ನಾಳೆ ಸಂಪುಟ ವಿಸ್ತರಣೆ ನಡೆಯಲಿದೆ. ಕಾದು ನೋಡಬೇಕಿದೆ. ಈಶ್ವರಪ್ಪ ಸಂಪುಟ ಸೇರುವ ಬಗ್ಗೆ ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಆದರೆ, ಅವರು ಸಂಪುಟ ಸೇರಬೇಕೆಂಬ ಅಪೇಕ್ಷೆ ಇದೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ನ ಎಸ್.ಸಿ., ಎಸ್.ಟಿ. ಸಮಾವೇಶಕ್ಕೆ ಬೆಲೆ ಎಲ್ಲಿದೆ? ಬಿಜೆಪಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಟೀಕೆ ಮಾಡಿಕೊಂಡು ಸಮಾವೇಶ ಮಾಡಲಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೀಸಲಾತಿ ಬಗ್ಗೆ ಮನಬಂದಂತೆ ಮಾತನಾಡುವುದು ಸರಿಯಲ್ಲ. ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ವಾಸ್ತವ ಸಂಗತಿ ಇಟ್ಟುಕೊಂಡು ಮಾತನಾಡಲಿ. ನೀವಂತೂ ಮೀಸಲಾತಿ ನೀಡಲಿಲ್ಲ, ನಾವು ಮಾಡಿದ್ದನ್ನು ಸ್ವಾಗತ ಮಾಡಬೇಕಿತ್ತು. ಟೀಕೆ ಮಾಡುವಂತದ್ದು ಅವರಿಗೆ ಗೌರವ ತರುವಂತದ್ದಲ್ಲ. ಮೀಸಲಾತಿ ಬಗ್ಗೆ ಯಾವುದೇ ಗೊಂದಲ ಇಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಂತೆ ನಾವು ಮುಂದೆ ಹೋಗುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.