ADVERTISEMENT

ಸಾಗರ: ಅಪಘಾತದಲ್ಲಿ ಸಾವಿಗೀಡಾದ ‘ಅಗ್ನಿವೀರ್’ ಯೋಧ ಪ್ರಜ್ವಲ್‌

ಜಿಗಳೆಮನೆ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ; ಕಂಬನಿ ಮಿಡಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 6:26 IST
Last Updated 10 ಆಗಸ್ಟ್ 2025, 6:26 IST
ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧ ಪ್ರಜ್ವಲ್ ಅವರ ಪೋಷಕರು ಅಂತಿಮ ನಮನ ಸಲ್ಲಿಸಿದರು 
ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧ ಪ್ರಜ್ವಲ್ ಅವರ ಪೋಷಕರು ಅಂತಿಮ ನಮನ ಸಲ್ಲಿಸಿದರು    

ಸಾಗರ: ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೆಮನೆ ಗ್ರಾಮದ ‘ಅಗ್ನಿವೀರ್’ ಯೋಧ ಆರ್.ಪ್ರಜ್ವಲ್ (21) ಗುರುವಾರ ರಾತ್ರಿ ಚಾಮರಾಜನಗರ ತಾಲ್ಲೂಕಿನ ಕಮರವಾಡಿ ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ಹುಟ್ಟೂರು ಜಿಗಳೆಮನೆ ಗ್ರಾಮದಲ್ಲಿ ಶನಿವಾರ ನಡೆಯಿತು.

ಪ್ರಜ್ವಲ್ ತಂದೆ ರಾಮಚಂದ್ರ ಚಾಮರಾಜನಗರದ ಸೇವಾ ಭಾರತೀ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಜ್ವಲ್ ‘ಅಗ್ನಿವೀರ್’ ಯೋಜನೆ ಮೂಲಕ ಭಾರತೀಯ ಸೇನೆಗೆ ಸೇರಿದ್ದು, ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಜೆಗಾಗಿ ಕಳೆದ ವಾರ ಚಾಮರಾಜನಗರಕ್ಕೆ ಪ್ರಜ್ವಲ್ ಬಂದಿದ್ದು ಗುರುವಾರ ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿದ್ದರು. ಅಂದು ರಾತ್ರಿ ಸ್ನೇಹಿತ ರೋಹಿತ್ ಅವರ ಬೈಕ್‌ನಲ್ಲಿ ಹಿಂಬದಿ ಕುಳಿತು ಪ್ರಜ್ವಲ್ ಅವರು ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಶುಕ್ರವಾರ ತಡರಾತ್ರಿ ಪ್ರಜ್ವಲ್ ಅವರ ಪಾರ್ಥಿವ ಶರೀರವನ್ನು ಜಿಗಳೆಮನೆ ಗ್ರಾಮಕ್ಕೆ ತರಲಾಯಿತು. ಶನಿವಾರ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಯಿತು. ಶಾಸಕ ಗೋಪಾಲಕೃಷ್ಣ ಬೇಳೂರು, ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಇಒ ಗುರುಕೃಷ್ಣ ಶೆಣೈ, ನಿವೃತ್ತ ಯೋಧರ ಸಂಘದ ಪ್ರಮುಖರಾದ ಸುಭಾಷ್ ಚಂದ್ರ ತೇಜಸ್ವಿ, ರಂಗರಾಜ್ ಬಾಳೆಗುಂಡಿ, ಬಿಜೆಪಿ ಮುಖಂಡರಾದ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ ಯಲಕುಂದ್ಲಿ, ಬಿ.ಟಿ.ರವೀಂದ್ರ ಹಾಜರಿದ್ದರು.

ಮಡುಗಟ್ಟಿದ ಶೋಕ: ಪ್ರಜ್ವಲ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಗಳೆಮನೆ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಅಂತ್ಯಕ್ರಿಯೆ ವೇಳೆ ಪ್ರಜ್ವಲ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

‘ದೇಶ ಸೇವೆಗಾಗಿ ಸೇನೆಗೆ ಸೇರಿದ್ದ ಪ್ರಜ್ವಲ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದು, ಅತ್ಯಂತ ದುರದೃಷ್ಟಕರ. ಇದು ಕೇವಲ ಅವರ ಕುಟುಂಬಕ್ಕೆ ಆಗಿರುವ ನಷ್ಟ ಮಾತ್ರವಲ್ಲ, ಇಡೀ ಸಮಾಜಕ್ಕೆ ಆಗಿರುವ ನಷ್ಟ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.

ಅಗಲಿದ ಯೋಧ ಪ್ರಜ್ವಲ್ ಅವರಿಗೆ ಭಾರತೀಯ ಸೇನೆ ವತಿಯಿಂದ ಅಂತಿಮ ಗೌರವ ಸಲ್ಲಿಸಲಾಯಿತು.
ಪ್ರಜ್ವಲ್

ಸಮವಸ್ತ್ರದೊಂದಿಗೆ ಫೋಟೊ ಶೂಟ್ 

ರಜೆಗೆಂದು ಊರಿಗೆ ಬಂದ ಸಂಭ್ರಮದಲ್ಲಿ ಸೇನೆಯ ಸಮವಸ್ತ್ರದಲ್ಲಿ ತಂದೆ ತಾಯಿ ಸಹೋದರಿಯೊಂದಿಗೆ ಮೂರು ದಿನಗಳ ಹಿಂದಷ್ಟೇ ಚಾಮರಾಜ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪ್ರಜ್ವಲ್ ಫೋಟೊ ಶೂಟ್ ಮಾಡಿಸಿ ಪೂಜೆ ಸಲ್ಲಿಸಿದ್ದರು. ಈ ಖುಷಿಯಲ್ಲಿರುವಾಗಲೇ ಪ್ರಜ್ವಲ್ ಕುಟುಂಬಕ್ಕೆ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.