ADVERTISEMENT

ರೈತರ ಉತ್ಪನ್ನ ಸೂಪರ್ ಮಾರ್ಕೆಟ್‌ಗೆ ಬರಲಿ: ಪ್ರೊ.ವಿ. ವೆಂಕಟಸುಬ್ರಮಣಿಯನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:04 IST
Last Updated 17 ಅಕ್ಟೋಬರ್ 2025, 6:04 IST
ಶಿವಮೊಗ್ಗದಲ್ಲಿ ‘ಕೃಷಿ ಯಾನ- ಪ್ರವಾಸೋದ್ಯಮ ಕೇಂದ್ರ’ ಹಾಗೂ ‘ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ’ಯನ್ನು ಪ್ರೊ.ವಿ. ವೆಂಕಟ ಸುಬ್ರಮಣಿಯನ್ ಗುರುವಾರ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ‘ಕೃಷಿ ಯಾನ- ಪ್ರವಾಸೋದ್ಯಮ ಕೇಂದ್ರ’ ಹಾಗೂ ‘ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ’ಯನ್ನು ಪ್ರೊ.ವಿ. ವೆಂಕಟ ಸುಬ್ರಮಣಿಯನ್ ಗುರುವಾರ ಉದ್ಘಾಟಿಸಿದರು   

ಶಿವಮೊಗ್ಗ: ‘ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಉಪ ಬೆಳೆಗಳನ್ನು ಬೆಳೆಯಬೇಕು. ಆ ಮೂಲಕ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ತಮ್ಮ ಉತ್ಪನ್ನಗಳಿಗೆ ಸ್ಥಾನ ಪಡೆದು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಬೆಂಗಳೂರು ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ವಿ. ವೆಂಕಟ ಸುಬ್ರಮಣಿಯನ್ ತಿಳಿಸಿದರು.

ವಿಶ್ವ ಆಹಾರ ದಿನಾಚರಣೆ ಅಂಗವಾಗಿ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕೃಷಿ ಯಾನ- ಪ್ರವಾಸೋದ್ಯಮ ಕೇಂದ್ರ’ ಹಾಗೂ ‘ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ’ ಉದ್ಘಾಟಿಸಿ ಮಾತನಾಡಿದರು.

ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯವು ಹೊಸ ಉತ್ಪನ್ನಗಳ ತಯಾರಿಕೆಗೆ ಅನೇಕ ಸೌಲಭ್ಯ ಒದಗಿಸಿ ಸಹಕಾರ ನೀಡುತ್ತಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ರೈತರು ಉಪ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು.

ADVERTISEMENT

ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಎಚ್.ಡಿ. ದೇವಿಕುಮಾರ್ ಅವರು ಕೃಷಿ ವಿವಿ ಪರಿಚಯಿಸಿದ ಕೃಷಿ ಪ್ರವಾಸೋದ್ಯಮ ಪ್ರಚಾರ ಕರಪತ್ರ ಬಿಡುಗಡೆ ಮಾತನಾಡಿ, ‘ಬಡತನದಿಂದ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಜನರು ನರಳುತ್ತಿದ್ದಾರೆ. ಅನ್ನ ತಿನ್ನುವವನಿಗಿಂತ ಚೆಲ್ಲುವವರ ಸಂಖ್ಯೆ ಹೆಚ್ಚಾಗಿದ್ದು, ತಿಳಿವಳಿಕೆ ಹೊಂದಿರುವ ಜನರೇ ಇಂತಹ ಕೆಲಸ ಮಾಡುತ್ತಿರುವುದು ದುಃಖಕರ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಕಿರಣ್ ಕುಮಾರ್, ವ್ಯವಸ್ಥಾಪನಾ ಮಂಡಳಿ ಸದಸ್ಯ ಎಚ್.ಎಸ್.ಶಶಾಂಕ್, ಕೃಷಿ ವಿವಿಯ ಡೀನ್ ಡಿ.ತಿಪ್ಪೇಶ್, ವಿಸ್ತರಣಾ ನಿರ್ದೇಶಕರಾದ ಜಿ.ಕೆ.ಗಿರೀಶ್‌, ಬಿ.ಸಿ.ಹನುಮಂತಸ್ವಾಮಿ, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ್, ವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.