
ಶಿವಮೊಗ್ಗ: ‘ಯೂರೋಪ್ ಒಕ್ಕೂಟದ ಇಯುಡಿಆರ್ ಕಾಯ್ದೆಯ (ಯುರೋಪಿಯನ್ ಯೂನಿಯನ್ ಡಿ–ಫಾರೆಸ್ಟೇಶನ್ ರೆಸಲ್ಯೂಶನ್) ಅಡಿ ಕಾಫಿ ರಫ್ತು ಮಾಡಲು ದೇಶದ ಬೆಳೆಗಾರರ ನೆರವಿಗೆ ಭಾರತೀಯ ಕಾಫಿ ಮಂಡಳಿ ಹೊಸದಾಗಿ ‘ಇಂಡಿಯಾ ಕಾಫಿ’ ಹೆಸರಿನ ಆ್ಯಪ್ ಪರಿಚಯಿಸಿದೆ’ ಎಂದು ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಹೇಳಿದರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶನಿವಾರ ಕೃಷಿ ಮತ್ತು ತೋಟಗಾರಿಕೆ ಮೇಳದ 2ನೇ ದಿನದ ಕಾರ್ಯಕ್ರಮದಲ್ಲಿ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ದೇಶದ 10 ರಾಜ್ಯಗಳಲ್ಲಿ ವಾರ್ಷಿಕ 3.5 ಲಕ್ಷ ಟನ್ ಕಾಫಿ ಬೆಳೆಯಲಾಗುತ್ತಿದೆ. ಅದರಲ್ಲಿ ಶೇ 45ರಷ್ಟು ಯೂರೋಪ್ ಒಕ್ಕೂಟದ ದೇಶಗಳಿಗೆ ರಫ್ತು ಆಗುತ್ತಿದೆ. ಆದರೆ, ಭಾರತದಲ್ಲಿ ಯಾವುದೇ ಮರ ಕಡಿಯದೇ ಕಾಫಿ ಬೆಳೆದ ಬೆಳೆಗಾರರಿಂದ ಮಾತ್ರ ಕಾಫಿ ಖರೀದಿಸುವ ನಿರ್ಣಯ ಕೈಗೊಂಡಿರುವ ಯೂರೋಪ್ ದೇಶಗಳ ಒಕ್ಕೂಟ ಈಚೆಗೆ ಇಯುಡಿಆರ್ ಹೆಸರಿನ ಕಾಯ್ದೆ ಜಾರಿಗೊಳಿಸಿದೆ. ಅದಕ್ಕೆ ಪೂರಕವಾಗಿ ಈ ಆ್ಯಪ್ ಕೆಲಸ ಮಾಡಲಿದೆ’ ಎಂದು ಹೇಳಿದರು.
‘ತಾವು ಖರೀದಿ ಮಾಡಿರುವ ಕಾಫಿ ಬೆಳೆದಿರುವ ತೋಟದ ಸ್ಥಿತಿಗತಿ, ಅಲ್ಲಿ ಕಾಫಿ ಬೆಳೆಯುವ ಮುನ್ನ ಎಷ್ಟು ಮರಗಳು ಇದ್ದವು. ಈಗ ಎಷ್ಟು ಮರಗಳು ಇವೆ. ಅವುಗಳ ಸ್ಥಿತಿಗತಿ ಏನು ಎಂಬುದರ ಮಾಹಿತಿಯನ್ನು ಚಿತ್ರ, ವಿಡಿಯೊ ಸಮೇತ ಈ ಆ್ಯಪ್ ಒಳಗೊಂಡಿದೆ’ ಎಂದು ತಿಳಿಸಿದರು.
‘ಸರ್ ಕೋಲ್ಮನ್ ನೇತೃತ್ವದಲ್ಲಿ 1925ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಮೊದಲ ಬಾರಿಗೆ ಕಾಫಿ ಸಂಶೋಧನಾ ಮಂಡಳಿ ಆರಂಭವಾಗಿತ್ತು. ಇದೇ ಡಿಸೆಂಬರ್‌ನಲ್ಲಿ ಮಂಡಳಿಯ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ವೇಳೆ ಕಾಫಿಯ ಹೊಸ ಎರಡು ತಳಿಗಳು ಹಾಗೂ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಲಾಗುವುದು’ ಎಂದರು.
‘ಕಾಫಿಯ ಕೊಯ್ಲಿನ ಅವಧಿಯ ಮೂರು ತಿಂಗಳಲ್ಲಿ ಬೆಳೆಗಾರರು ಕೂಲಿಗಾಗಿ ಈಗ ₹1800 ಕೋಟಿ ಖರ್ಚು ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಕಾಫಿ ಕೊಯ್ಲು ಯಂತ್ರ ಅವಿಷ್ಕಾರ ಮಾಡಿಕೊಡುವಂತೆ ರೋರ್ಕಿಯ ಐಐಟಿ ಜೊತೆ ಕಾಫಿ ಮಂಡಳಿ ಒಡಂಬಡಿಕೆ ಮಾಡಿಕೊಂಡಿದೆ. ಅವಿಷ್ಕಾರ ಯಶಸ್ವಿಯಾದರೆ ₹700 ಕೋಟಿಯಷ್ಟು ಉಳಿತಾಯ ಮಾಡಬಹುದು. ಕಾಫಿಯಲ್ಲಿ ಬೋರರ್ ತಪ್ಪಿಸಲು ಸಂಶೋಧನೆಗೆ ತಮಿಳುನಾಡು ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
‘2047ರ ಹೊತ್ತಿಗೆ ಕಾಫಿಯ ರಫ್ತು ಪ್ರಮಾಣವನ್ನು ಏಳು ಲಕ್ಷ ಟನ್‌ಗೆ ಹೆಚ್ಚಳಗೊಳಿಸಿ ವಾರ್ಷಿಕ ₹50,000 ಕೋಟಿ ವಿದೇಶಿ ವಿನಿಮಯ ಗಳಿಸುವ ಯೋಜನೆ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕೂಡ ಮಂಡಳಿಯೊಂದಿಗೆ ಕೈ ಜೋಡಿಸಲಿ’ ಎಂದು ಸಲಹೆ ನೀಡಿದರು.
‘ಉತ್ಕೃಷ್ಟ ಹಾಗೂ ಸಾವಯವ ರೀತಿಯಲ್ಲಿ ಬೆಳೆದ ಕಾಫಿಗೆ ಈಗಲೂ ಗ್ರಾಹಕರಿಂದ ಅತಿಹೆಚ್ಚು ಬೇಡಿಕೆ ಇದೆ. ಅಂತಹ ಬೆಳೆಗಾರರನ್ನು ಗುರುತಿಸಿ ಅವರ ಬ್ರಾಂಡ್ ಸೃಷ್ಟಿಸುವ, ಗ್ರಾಹಕರೊಂದಿಗೆ ಸಂಪರ್ಕ ಮಾಡಿಸುವ ಕೆಲಸವನ್ನು ಕಾಫಿ ಮಂಡಳಿ ಮಾಡುತ್ತಿದೆ. ಅದಕ್ಕೆ ಕೃಷಿ ವಿಶ್ವವಿದ್ಯಾಲಯ ಕೂಡ ಕೈಜೋಡಿಸಲಿ’ ಎಂದರು.
‘ಕೃಷಿ ಸಮಸ್ಯೆ, ಅವಕಾಶಗಳ ತಾಣ. ಈ ಎರಡರ ಮಧ್ಯೆ ಕೃಷಿ ವಿಶ್ವವಿದ್ಯಾಲಯ ಕೊಂಡಿಯಾಗಿ ಕೆಲಸ ಮಾಡಿದರೆ ರೈತರಿಗೆ ಸೂಕ್ತ ಪರಿಹಾರಗಳನ್ನು ಕಲ್ಪಿಸಬಹುದು. ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಮಾನವ– ಪ್ರಾಣಿ ಸಂಘರ್ಷ, ಮಾರುಕಟ್ಟೆಯ ಸಮಸ್ಯೆಗಳಿಗೆ ಏನು ಪರಿಹಾರ ಎಂಬುದರ ಜೊತೆಗೆ ರೈತರಿಗೆ ಆರ್ಥಿಕ ಶಿಸ್ತನ್ನು ಕೃಷಿ ವಿಶ್ವವಿದ್ಯಾಲಯಗಳು ಹೇಳಿಕೊಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಬಿ.ಕೆ.ಕುಮಾರಸ್ವಾಮಿ, ಜೆ.ಜಿ.ಕಾವೇರಿಯಪ್ಪ, ಎಚ್.ಡಿ.ದೇವಿಕುಮಾರ್, ಶಶಾಂಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವೀರಶೆಟ್ಟಿ, ಮುರಳೀಧರ, ಗೀತಾ, ಸಂಸ್ಥೆಯ ಟ್ರಸ್ಟಿ ಹರಿಕೃಷ್ಣ ಪಾಲ್ಗೊಂಡಿದ್ದರು.
ಡಿಪ್ಲೊಮಾ ಇನ್ ಎಸ್ಟೇಟ್ ಮ್ಯಾನೇಜ್‌ಮೆಂಟ್ ಕಲಿಕೆಗೆ ಈಗ ಹೆಚ್ಚಿನ ಬೇಡಿಕೆ ಇದೆ. ಉತ್ತರ ಭಾರತದ ವಿದ್ಯಾರ್ಥಿಗಳು ಅದರ ಅವಕಾಶ ಪಡೆಯುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳೂ ಪಿಯುಸಿ ನಂತರ ಅದರ ಕಲಿಕೆಗೆ ಮುಂದಾಗಲಿಎಂ.ಜೆ.ದಿನೇಶ್, ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ
ಕೃಷಿ ಯಶಸ್ಸಿಗೆ ಯಾಂತ್ರೀಕರಣ ಮದ್ದು: ವೀರೇಂದ್ರ ಹೆಗ್ಗಡೆ
ಶಿವಮೊಗ್ಗ: ‘ಕೆಲಸಕ್ಕೆ ಜನ ಸಿಕ್ಕದ ಕೂಲಿಯ ದರ ವಿಪರೀತ ಹೆಚ್ಚಳಗೊಂಡಿರುವ ಈ ಹೊತ್ತಿನಲ್ಲಿ ಕೃಷಿ ಯಾಂತ್ರೀಕರಣ ಮಾತ್ರ ರೈತರ ಉಳಿವಿಗೆ ಸಾಧ್ಯ. ಹೀಗಾಗಿ ಎಲ್ಲ ರೈತರೂ ಕೃಷಿ ಯಂತ್ರೋಪಕರಣಗಳ ಬಳಕೆಯ ವಿಧಾನ ತಿಳಿದುಕೊಳ್ಳಬೇಕು. ಅದಕ್ಕೆ ಕೃಷಿ ಮೇಳದಂತಹ ಚಟುವಟಿಕೆ ನೆರವಾಗಲಿವೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶನಿವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾಗತಿಕ ವಾತಾವರಣ ಬದಲಾವಣೆಯಿಂದ ಅತಿವೃಷ್ಟಿ ಅನಾವೃಷ್ಟಿಗಳು ಈಗ ಸಹಜ ಎಂಬಂತಾಗಿವೆ. ಹೀಗಾಗಿ ಇಂದು ರೈತರು ಮಳೆಯ ಭವಿಷ್ಯ ನಂಬಿ ಕೃಷಿ ಮಾಡಲು ಆಗುವುದಿಲ್ಲ. ವಾತಾವರಣದ ಈ ಬದಲಾವಣೆಗೆ ಹೊಂದಿಕೊಂಡು ಕೃಷಿ ಮಾಡಲು ವಿಶ್ವವಿದ್ಯಾಲಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ತಜ್ಞರ ಸಲಹೆ ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಕೇಂದ್ರದ ಬೆಳೆ ವಿಮೆ ರೈತರಿಗೆ ಅತ್ಯಂತ ಪೂರಕವಾಗಿದೆ. ಹೀಗಾಗಿ ಎಲ್ಲರೂ ವಿಮೆ ಮಾಡಿಸಿ’ ಎಂದು ಹೇಳಿದ ಅವರು ‘ಕೃಷಿ ತೋ ನಾಸ್ತಿ ದುರ್ಭಿಕ್ಷಂ’ ಎಂಬಂತೆ ಕೃಷಿಯನ್ನೇ ಅವಲಂಬಿಸಿದವರಿಗೆ ಅದ್ದೂರಿ ಅಲ್ಲದಿದ್ದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಶ್ರೀಮಂತ ರೈತರ ಅನುಕರಣೆ ಮಾಡದೇ ಇರುವಷ್ಟು ಮಿತಿಯಲ್ಲಿ ಸರಳವಾಗಿ ಕೃಷಿ ಮಾಡಿ’ ಎಂದು ಹೇಳಿದರು.
‘ರೈತರು ಕುತೂಹಲಿಗಳಾಗಿದ್ದು ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೃಷಿಗೆ ಸಂಬಂಧಿಸಿದ ಹೆಚ್ಚು ಹೆಚ್ಚು ವಿಚಾರಗಳನ್ನು ಕೃಷಿ ಮೇಳದಂತಹ ಸಂದರ್ಭದಲ್ಲಿ ತಜ್ಞರಿಂದ ತಿಳಿದುಕೊಳ್ಳಲು ಇದರಿಂದ ಸಾಧ್ಯ. ಅಡಿಕೆ ಬೇಯಿಸಿ ಬಣ್ಣ ಹಾಕುವ ಯಂತ್ರಗಳು ಇಂದು ಬಂದಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಿ. ಕೃಷಿ ವಿಶ್ವವಿದ್ಯಾಲಯದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ’ ಎಂದು ರೈತರಿಗೆ ಸಲಹೆ ನೀಡಿದರು.
450ಕ್ಕೂ ಹೆಚ್ಚು ಮಳಿಗೆಗಳು ವೀಕ್ಷಣೆಗೆ ಲಭ್ಯ
ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ 225 ಹೈಟೆಕ್ ಮಳಿಗೆ 150 ಎಕಾನಮಿ ಮಳಿಗೆ 25 ಯಂತ್ರೋಪಕರಣ ಮಳಿಗೆ 40 ಆಹಾರ ಮಳಿಗೆಗಳು ಸೇರಿದಂತೆ ಒಟ್ಟು 450 ಮಳಿಗೆಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಬಂಧಿತ ತಾಂತ್ರಿಕ ಮಾಹಿತಿ ಯಂತ್ರೋಪಕರಣ ಪ್ರದರ್ಶನ ಆಯೋಜಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಕೂಡ ಗಮನ ಸೆಳೆದಿದ್ದು ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ-ಸೂಚನೆ ಹಾಗೂ ಅರಿವು ಮೂಡಿಸುವ ಮಳಿಗೆ ಅಲ್ಲದೇದೆ ಕೃಷಿಯಲ್ಲಿ ನೂತನ ಆವಿಷ್ಕಾರದ ಯಂತ್ರೋಪಕರಣ ಹಾಗೂ ಔಷಧಿ ಮಳಿಗೆಗಳು ಅಣಬೆ ಕೃಷಿ ತೆಂಗು ಬಾಳೆ ಅಡಿಕೆ ಭತ್ತ ಮುಂತಾದ ಬೆಳೆಗಳ ಹಾಗೂ ವಿವಿಧ ಸಂಶೋಧನಾ ತಳಿಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿತ್ತು.
ಮೇಳದಲ್ಲಿ ದತ್ತು ಪ್ರಕ್ರಿಯೆ ಮಾಹಿತಿ..
ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಲು ಮತ್ತು ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ 1098 ಮಾಹಿತಿ ನೀಡಲು ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಸ್ಟಾಲ್ ಅಳವಡಿಸಲಾಗಿದೆ. ಮಕ್ಕಳು ಪ್ರೀತಿ ಆರೈಕೆ ಮತ್ತು ಬೆಳವಣಿಗೆಯ ಅವಕಾಶಗಳಿಗೆ ಅರ್ಹರು. ಒಂದು ಕುಟುಂಬವು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಂತ ಅನುಕೂಲಕರ ವಾತಾವರಣ ಒದಗಿಸುತ್ತದೆ. ಇದು ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಅವಶ್ಯಕ. ಹೆಚ್ಚು ಅಂತರ್ಗತ ಸಹಾನುಭೂತಿ ಮತ್ತು ಸ್ಪಂದಿಸುವ ಈ ದತ್ತು ಪ್ರಕ್ರಿಯೆ ವ್ಯವಸ್ಥೆ ಕಾನೂನು ರೀತಿಯಲ್ಲಿ ಸುಭದ್ರಪಡಿಸಬಹುದಾಗಿದೆ ಎಂದು ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.