ADVERTISEMENT

ಅಲೆಮಾರಿ ಸಮುದಾಯ; ಶೇ 1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹ

ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:33 IST
Last Updated 29 ಆಗಸ್ಟ್ 2025, 4:33 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಡಿಎಸ್‌ಎಸ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಿಂದ ನಡೆದ ಪ್ರತಿಭಟನೆಯ ನೋಟ
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಡಿಎಸ್‌ಎಸ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಿಂದ ನಡೆದ ಪ್ರತಿಭಟನೆಯ ನೋಟ   

ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯದವರು ಪ್ರತಿಭಟನೆ ನಡೆಸಿದರು.

ಈ ವೇಳೆ ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ವರದಿ ಅನುಸಾರ ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

‘ನಾಗಮೋಹನ ದಾಸ್ ತಮ್ಮ ವರದಿಯಲ್ಲಿ ಪರಿಶಿಷ್ಟ ಸಮುದಾಯಗಳನ್ನು ಐದು ವಿಭಾಗಗಳನ್ನಾಗಿ ಪರಿಗಣಿಸಿ ಮೀಸಲಾತಿ ಹಂಚಿಕೆ ಮಾಡಿದ್ದರು. ಸರ್ಕಾರ ಅದನ್ನು ಪರಿಷ್ಕರಿಸಿ ಮೂರು ವರ್ಗಕ್ಕೆ ಸೀಮಿತಗೊಳಿಸಿದೆ. ಅಲೆಮಾರಿ ಜಾತಿಗಳಿಗಾಗಿ ಶೇ 1ರಷ್ಟು ನೀಡಿದ್ದ ಮೀಸಲಾತಿ ತೆಗೆದು ಸರ್ಕಾರ ‘ಸಿ’ ವರ್ಗಕ್ಕೆ ವಿಲೀನಗೊಳಿಸಿದೆ. ಅದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಸಿ’ ವರ್ಗದಲ್ಲಿ ಬಲಾಢ್ಯ ಜಾತಿಗಳಿವೆ. ಇಲ್ಲಿ ಸಣ್ಣ ಜಾತಿಗಳು ಮೀಸಲಾತಿ ಬಯಸುವುದು ಮತ್ತು ಪಡೆಯುವುದು ಕಷ್ಟವಾಗುತ್ತದೆ. ಇದರಿಂದ ಅಲೆಮಾರಿ ಸಮುದಾಯದ 59 ಜಾತಿಗಳಿಗೂ ತೊಂದರೆಯಾಗುತ್ತದೆ. ಸದಾಶಿವ ಆಯೋಗ ಅಲೆಮಾರಿಗಳಿಗೆ ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ನೀಡಿತ್ತು. ನಾಗಮೋಹನ ದಾಸ್ ಆಯೋಗ ಕೂಡ ಪ್ರತ್ಯೇಕ ಮೀಸಲಾತಿಯನ್ನು ಅಲೆಮಾರಿಗಳಿಗೆ ಕಲ್ಪಿಸಿತ್ತು. ಆದರೆ, ಸರ್ಕಾರ ಇದನ್ನು ಪರಿಗಣಿಸದೇ ಇರುವುದು ದುರಾದೃಷ್ಟಕರ’ ಎಂದು ಪ್ರತಿಭಟನಕಾರರು ಹೇಳಿದರು.

ಪ್ರತಿಭಟನೆಯಲ್ಲಿ ಗೋಸಂಗಿ ಸಮಾಜದ ಪ್ರಮುಖರಾದ ಟಿ.ಕೆ. ಗಿರೀಶ್, ಟಿ.ಎಸ್. ಜಯಮ್ಮ, ಆರ್. ಆನಂದ್, ಸುಡುಗಾಡು ಸಿದ್ಧ ಸಮಾಜದ ಗಂಗಣ್ಣ, ಸಿಂಧೋಳು ಸಮಾಜದ ಮುಖಂಡ ಮಾರುತಿ, ಶಿಳ್ಳೇಕ್ಯಾತರ ಸಮಾಜದ ಆರ್. ರಾಜೀವ್, ಎಚ್. ಶಿವಲಿಂಗಪ್ಪ, ಸಿ. ಗಣೇಶ್, ಕಿರಣ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.