
ಶಿವಮೊಗ್ಗ: ‘ಅಲ್ಲಮ ಯಾರಿಗೂ ಸಿಗದಂತೆ ಕಾಡಿದ್ದಾನೆ. ದಶೇಂದ್ರಿಯಗಳಿಂದ ಅಲ್ಲಮನನ್ನು ಮುಟ್ಟಲು ಸಾಧ್ಯವಾಗಿಲ್ಲ. ಬೆಡಗಿನ ಭಾಷೆ, ವಾಚ್ಯವಾಗಿ ಅಲ್ಲಮನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ವೇದಕಾಲದಲ್ಲಿ ವೈಖರಿ, ವಾಕ್, ಪಶ್ಚಂತಿ, ಪರ, ಮಧ್ಯಮ ಹೀಗೆ ಭಾಷೆಯ ನಾಲ್ಕು ಸ್ಥರಗಳಿವೆ ಎಂದು ಹೇಳುತ್ತಾರೆ. ಈ ನಾಲ್ಕೂ ಬಗೆಯ ರಚನೆಗಳು ಅಲ್ಲಮನಲ್ಲಿ ಇವೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲದಯ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.
ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಬಸವ ಕೇಂದ್ರದಿಂದ ಚಿಂತನ ಕಾರ್ತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಡೀ ವಿಶ್ವದಲ್ಲಿರುವ ಎಲ್ಲ ದಾರ್ಶನಿಕರು, ಅನುಭಾವಿಗಳನ್ನು ಒಂದೆಡೆ ಸೇರಿಸಿದರೆ, ಅವರೆಲ್ಲರಿಗೂ ಸರಿಸಮನಾಗಿ ಅಲ್ಲಮಪ್ರಭು ತೂಗುತ್ತಾರೆ. ಅಂತಹ ಶಕ್ತಿ ಅಲ್ಲಮಪ್ರಭುವಿನಲ್ಲಿತ್ತು’ ಎಂದರು.
‘900 ವರ್ಷಗಳಿಂದ ಅಲ್ಲಮಪ್ರಭು ಅನೇಕರನ್ನು ಕಾಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಅಲ್ಲಮನ ಬಗ್ಗೆ ಯೋಚನೆ ಮಾಡಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ ಸೇರಿ ಅನೇಕರು ಅಲ್ಲಮನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರಿಂದಲೂ ಸಾಧ್ಯವಾಗಿಲ್ಲ’ ಎಂದು ಹೇಳಿದರು.
‘40 ವರ್ಷಗಳಿಂದ ಅಲ್ಲಮನ ಬಗ್ಗೆ ಅಧ್ಯಯನ ಮಾಡಿಕೊಂಡು ಬಂದಿದ್ದೇನೆ. ಆದರೂ ಅಲ್ಲಮನ ಕುರಿತು ಪರಿಪೂರ್ಣವಾಗಿ ಹೇಳುವ ಧೈರ್ಯ ನನಗೂ ಇಲ್ಲ. ಅಲ್ಲಮನ ವಚನಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೆಡಗು ಬೇಕು. ಅಲ್ಲಮನ ಬಹುತೇಕ ವಚನಗಳು ಬೆಡಗು ಭಾಷೆಯಿಂದಲೇ ಕೂಡಿವೆ. ಹಾಗಾಗಿ ಅವುಗಳನ್ನು ಸಾಮಾನ್ಯರಿಗೆ ಅರ್ಥ ಆಗಲ್ಲ. ಸಾಧನೆಯ ದಾರಿ ಹಿಡಿದವರಿಗೆ ಮಾತ್ರ ವಚನಗಳ ಸಾರ ಅರ್ಥವಾಗಲಿವೆ’ ಎಂದರು.
ಇದೇ ವೇಳೆ ಬಸವ ಮರುಳಸಿದ್ಧ ಸ್ವಾಮೀಜಿ ಅವರ ‘ಬೆಡಗು– ಬೆಳಗು’ ಮತ್ತು ಕುವೆಂಪು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಜಿ.ಪ್ರಶಾಂತ್ ನಾಯಕ ಅವರ ‘ಬಸವಣ್ಣ: ಸಾಂಸ್ಕೃತಿಕ ನಾಯಕ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಆಯನೂರು ಮಂಜುನಾಥ, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್, ಇ.ವಿಶ್ವಾಸ, ಧೀರರಾಜ ಹೊನ್ನವಿಲೆ ಮತ್ತಿತರಿದ್ದರು.
ನಮ್ಮಲ್ಲಿರುವ ಹರಿಷಡ್ವರ್ಗಗಳನ್ನು ದೂರ ಮಾಡಿಕೊಂಡು ಬದುಕು ಸಾಗಿಸಬೇಕಿದೆ. ಇನ್ನೊಬ್ಬರಿಗೆ ಕೆಡಕು ಬಯಸದೇ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಬೇಕಿದೆ. ಅಂತರಂಗದ ದೀಪಕ್ಕೆ ಶಕ್ತಿ ತುಂಬುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ.ಬಿ.ವೈ.ರಾಘವೇಂದ್ರ ಸಂಸದ
ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಬಸವ ಮರುಳಸಿದ್ಧ ಸ್ವಾಮೀಜಿ ಅವರು ವಚನಕಾರರ ಚಿಂತನೆಗಳನ್ನು ನಮ್ಮಲ್ಲಿ ತುಂಬುತ್ತಿದ್ದಾರೆ. ವರ್ಷ ಅಲ್ಲಮಪ್ರಭುವಿನ ನುಡಿಗಟ್ಟು ಇಟ್ಟುಕೊಂಡು ಚಿಂತನ ಕಾರ್ತಿಕ ನಡೆಸಿಕೊಂಡು ಬರಲಾಗಿದೆಜಿ.ಬೆನಕಪ್ಪ ಬಸವ ಕೇಂದ್ರದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.