ADVERTISEMENT

ಆನಂದಪುರ: ಹಳೆ ವಿದ್ಯಾರ್ಥಿಯ ನೆರವು: ಶಾಲೆಗೆ ಹೈಟೆಕ್‌ ಸ್ಪರ್ಶ

ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಮುಂದಾದ ರೇ-ಕ್ಯೂ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 4:22 IST
Last Updated 27 ನವೆಂಬರ್ 2022, 4:22 IST
ರೇ-ಕ್ಯೂ ಸಂಸ್ಥೆ ನಿರ್ಮಿಸಿದ ಅಡುಗೆ ಮನೆ 
ರೇ-ಕ್ಯೂ ಸಂಸ್ಥೆ ನಿರ್ಮಿಸಿದ ಅಡುಗೆ ಮನೆ    

ಆನಂದಪುರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈಗಿನ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಓದಿ, ಅದೇ ಶಾಲೆಗೆ ತಮ್ಮ ಸಂಸ್ಥೆಯಿಂದ ಹೊಸ ಸ್ಪರ್ಶ ನೀಡಿದ್ದಾರೆ ಇಲ್ಲೊಬ್ಬರು ದಾನಿ.

ಉನ್ನತ ಹುದ್ದೆಯಲ್ಲಿದ್ದರೂ ತಾವು ಓದಿದ ಶಾಲೆ ಮರೆಯದವರು ರೇ-ಕ್ಯೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾಶ್ ರುಕ್ಮಯ್ಯ.

1987-88ರಲ್ಲಿ ಇಂದಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಪ್ರಕಾಶ್‌, ಕಡುಬಡತನವಿದ್ದರೂ ಉನ್ನತ ವಿದ್ಯಾಭ್ಯಾಸ ಮಾಡಿ ರೇ-ಕ್ಯೂ ಸಂಸ್ಥೆಯ ಸಿಇಒ ಆಗಿದ್ದಾರೆ.

ADVERTISEMENT

ತಾವು ಮಾತ್ರ ಬದುಕದೆ, ತಮ್ಮ ಸುತ್ತಮುತ್ತಲ ಪರಿಸರ ಸಹ ಉತ್ತಮವಾಗಿರಬೇಕು ಎನ್ನುವ ಆಶಯ ಇಟ್ಟುಕೊಂಡ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಬಡತನದಿಂದ ಬಂದ ಇವರು ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ.

ಶಾಲೆಗೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಅಡುಗೆ ಕೊಠಡಿಯನ್ನು ಹಾಗೂ ಧ್ವಜಸ್ತಂಭವನ್ನು ₹ 14 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ, ಶನಿವಾರ ಉದ್ಘಾಟನೆ ಮಾಡಿದ್ದಾರೆ. ಬಾಯ್ಲರ್ ಆಳವಡಿಕೆಗೆ ₹ 4 ಲಕ್ಷದ ಚೆಕ್ ಅನ್ನು ಶಾಲೆಗೆ ಹಸ್ತಾಂತರಿಸಿದ್ದಾರೆ.

ಶಾಲೆಗೆ ಬೇಕಾದ 4 ಶೌಚಾಲಯದ ನಿರ್ಮಾಣ ಹಾಗೂ ಮಕ್ಕಳ ಊಟದ ಸಭಾಂಗಣ ಸಹ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಸಂಸ್ಥೆ ಯೋಚಿಸುತ್ತಿದೆ ಎಂದೂ ಅವರು ವಾಗ್ದಾನ ಮಾಡಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸುವ ಮೂಲಕ ತಾವು ಓದಿದ ಶಾಲೆಯನ್ನೂ ಯಾರು ಮರೆಯಬಾರದು. ಸರ್ಕಾರಿ ಶಾಲೆಗಳಲ್ಲೂ ಸಹ ಉತ್ತಮ ಶಿಕ್ಷಣ ಸಿಗುತ್ತದೆ. ಆದರೆ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ತುಡಿತ ಅವರದು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಕನ್ನಡದ ಜೊತೆಗೆ ಆಧುನಿಕ ಯುಗದಲ್ಲಿ ಪೈಪೋಟಿ ನೀಡಲು ಇಂಗ್ಲಿಷ್ ಭಾಷೆ ಕಲಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

‘ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಓದುತ್ತಿದ್ದು, ಇಂತಹ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಸಂಸ್ಥೆಯನ್ನಾಗಿಸುವ ನಿಟ್ಟಿನಲ್ಲಿ ಗೆಳೆಯರು ಚಿಂತಿಸಿದ್ದೇವೆ’ ಎಂದು ಅವರುಹೇಳಿ‌ದರು.

ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಕಾಶ್‌ ರುಕ್ಮಯ್ಯ ಅವರ ಕಾರ್ಯ ಶ್ಲಾಘನೀಯ.

–ಬಿಂಬ ಕೆ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.