ADVERTISEMENT

ಲಾರಿ ಮಾಲೀಕರು, ಚಾಲಕರ ಸಂಘದಿಂದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 14:56 IST
Last Updated 18 ಜನವರಿ 2024, 14:56 IST
ಆನಂದಪುರದಲ್ಲಿ ಮಲೆನಾಡು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು
ಆನಂದಪುರದಲ್ಲಿ ಮಲೆನಾಡು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು   

ಆನಂದಪುರ: ಕೇಂದ್ರ ಸರ್ಕಾರವು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಮಾಡಿರುವ ಭಾರತೀಯ ನ್ಯಾಯ ಸಂಹಿತೆಯ ಕೆಲವು ಅಂಶಗಳನ್ನು ವಿರೋಧಿಸಿ ಮಲೆನಾಡು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಗುರುವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. 

ನೂತನ ನ್ಯಾಯ ಸಂಹಿತೆಯು ಚಾಲಕರು ಹಾಗೂ ಮಾಲೀಕರಿಗೆ ಮಾರಕವಾಗಲಿದೆ ಎಂದು ಆರೋಪಿಸಿರುವ ಪ್ರತಿಭಟನಕಾರರು ಈ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಕೇಂದ್ರಕ್ಕೆ ಒತ್ತಾಯಿಸಿದರು. 

‘ಇದು ಮಾಲೀಕರು ಹಾಗೂ ಚಾಲಕರಿಗೆ ಮರಣ ಶಾಸನವಾಗಲಿದೆ. ಕೇಂದ್ರ ಸರ್ಕಾರ  ಮಾಲಿಕರು ಹಾಗೂ ಚಾಲಕರ ಪರಿಸ್ಥಿತಿಗಳನ್ನು ಅವಲೋಕಿಸಬೇಕು’ ಎಂದು ಕೇಂದ್ರದ ವಿರುದ್ದ ಘೋಷಣೆ ಕೂಗಿದರು.

ADVERTISEMENT

‘ಹಿಟ್‌ ಅಂಡ್ ರನ್ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ ₹7 ಲಕ್ಷ ದಂಡ ವಿಧಿಸಲು ಹೊರಟಿರುವುದು ಸರಿಯಲ್ಲ. ಚಾಲಕರ ಬಳಿ ₹7 ಲಕ್ಷ ಇದ್ದರೆ, ಅವರು ಏಕೆ ಚಾಲಕ ವೃತ್ತಿಗೆ ಹೋಗುತ್ತಾರೆ. ಜೈಲಿಗೆ ಹೋದರೆ ಅವರ ಕುಟುಂಬದ ಪರಿಸ್ಥಿತಿ ಏನು. ಸರ್ಕಾರ ಅವರ ಕುಟುಂಬದ ಹೊಣೆ ತೆಗೆದುಕೊಳ್ಳುತ್ತದಯೇ? ಎಂದು ಮಲೆನಾಡು ಮಾಲಿಕರು ಹಾಗೂ ಚಾಲಕರು ಸಂಘದ ಅಧ್ಯಕ್ಷರಾದ ರಾಘವೇಂದ್ರ ಪ್ರಶ್ನೆ ಮಾಡಿದರು. 

‘ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಾದಿ ಪ್ರತಿಭಟನೆ ಮುಂದುವರೆಯಲಿದೆ. ಎಲ್ಲ ಲಾರಿ ಮಾಲೀಕರು ಹಾಗೂ ಚಾಲಕರು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ತಡೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಸುಮಾರು 30 ನಿಮಿಷ ನೂರಾರು ವಾಹನಗಳು ಹೆದ್ದಾರಿಯಲ್ಲಿ ನಿಲ್ಲುವಂತಾಯಿತು. ನಂತರ ಪೋಲಿಸರು ಮಧ್ಯಪ್ರವೇಶಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಉಪಾಧ್ಯಕ್ಷ ರವಿಕುಮಾರ್ ಯಡೇಹಳ್ಳಿ, ಪ್ರಮುಖರಾದ ನಾಗರಾಜ, ರಾಜಪ್ಪ, ಆರಫ್, ಉಲ್ಲಾಸ್, ಜಾಬೀರ್, ರವಿ, ಹುಚ್ಚರಾಯ, ಶ್ರೀಧರ್, ಹರೀಶ್, ಸತೀಶ್ ಇದ್ದರು.

ಆನಂದಪುರದಲ್ಲಿ ಮಲೆನಾಡು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.