ಆನವಟ್ಟಿ: ಪ್ರತಿ ಶನಿವಾರ ನಡೆಯುವ ಸಂತೆ ಸುಸೂತ್ರವಾಗಿ ನಡೆಯಲಿ, ಜನಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಪಟ್ಟಣದಲ್ಲಿ 5 ಎಕರೆಗಿಂತಲ್ಲೂ ಹೆಚ್ಚಿನ ಸ್ಥಳಾವಕಾಶವಿದ್ದರೂ, ವ್ಯಾಪಾರಿಗಳಿಗೆ ವ್ಯವಸ್ಥಿತ ಸೌಕರ್ಯಗಳಿಲ್ಲ. ಮಳೆ ಬಂದಾಗ ಕೆಸರುಮಯ ರಸ್ತೆಗಳ ಬದಿಯಲ್ಲೇ ವ್ಯಾಪಾರಿಗಳು ಅಂಗಡಿ ಹಾಕುತ್ತಾರೆ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ.
ಈ ಸಂತೆಯಲ್ಲಿ ವಹಿವಾಟು ನಡೆಸುವ ವ್ಯಾಪಾರಿಗಳಿಗಾಗಿ 20 ವರ್ಷಗಳ ಹಿಂದೆ ಎಪಿಎಂಸಿಯಿಂದ ತಗಡಿನ ಶೆಡ್ ನಿರ್ಮಾಣವಾಗಿದೆ. ಆದರೆ ಅದು, ವಾಹನಗಳ ಪಾರ್ಕಿಂಗ್‌ಗಾಗಿ ಹಾಗೂ ಗುಜರಿ ವಸ್ತುಗಳನ್ನು ತುಂಬಲು ಬಳಕೆಯಾಗುತ್ತಿದೆ. ಸಂತೆಯಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರಿಗಾಗಿ ಶೆಡ್ ನಿರ್ಮಿಸಿದ್ದರೂ, ಅದನ್ನು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಸಂತೆ ಸುಂಕ ವಸೂಲಿ ಮಾಡುವವರಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಶೆಡ್‌ಗಳನ್ನು ಇನ್ನೂ ತೆರವು ಮಾಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಈ ವರ್ಷ ಸಂತೆ ಸುಂಕ ವಸೂಲಿ ₹ 10 ಲಕ್ಷಕ್ಕೆ ಹರಾಜಾಗಿದೆ. ಆದರೆ ಸಂತೆಗೆ ಬರುವ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಮೂತ್ರ ವಿಸರ್ಜನೆ ಮಾಡಬೇಕಾದರೆ ಬಯಲಿಗೇ ಹೋಗಬೇಕಿದೆ ಅಥವಾ ಇಲ್ಲಿಂದು ಒಂದು ಕಿ.ಮೀ. ದೂರದ ಬಸ್ ನಿಲ್ದಾಣಕ್ಕೆ ದೌಡಾಯಿಸಬೇಕಾದ ಅನಿವಾರ್ಯತೆ ಇದೆ. ಮಳೆ ಬಂದರಂತೂ ರಸ್ತೆಯೆಲ್ಲಾ ಕೆಸರಾಗುತ್ತದೆ. ಮೈಕೈಗೆ ಕೆಸರು ಸಿಡಿಸಿಕೊಂಡೇ ತರಕಾರಿ ಕೊಳ್ಳಬೇಕಿದೆ ಎಂದು ಗ್ರಾಹಕರು ವಿವರಿಸುತ್ತಾರೆ.
ನಾಲ್ಕು ವರ್ಷಗಳ ಹಿಂದೆ ಇಲ್ಲಿ ಶೌಚಾಲಯ ನಿರ್ಮಿಸಲಾಗಿದ್ದರೂ ಅದನ್ನು ಜನರ ಬಳಕೆಗೆ ಇನ್ನೂ ನೀಡಿಲ್ಲ. ಇದನ್ನು ಗಮನಿಸಿದರೆ ಕಾಮಗಾರಿ ಕಳಪೆಯಾಗಿದೆ ಎಂಬ ಅನುಮಾನ ದಟ್ಟವಾಗುತ್ತದೆ. ಈ ಬಗ್ಗೆ ತನಿಖೆಗೆ ನಡೆಸಿ, ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಆಗ್ರಹ.
ತರಕಾರಿ ಮಾರುಕಟ್ಟೆಯ ಕಾಲುದಾರಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿ, ಸಂತೆ ಪ್ರದೇಶವನ್ನು ಸ್ವಚ್ಚಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ, ಅವರು ಹಾರಿಕೆ ಉತ್ತರ ನೀಡಿ ಕಾಲ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಗುಜರಿ ವಸ್ತುಗಳು ತುಂಬಿರುವ ತಗಡಿನ ಶೆಡ್ ಖಾಲಿ ಮಾಡಿಸಿ ವ್ಯಾಪಾರಿಗಳಿಗೆ ನೀಡಬೇಕು. ಕೆಲವು ಕಡೆ ಬೆಳೆದಿರುವ ಪೊದೆಗಳನ್ನು ತೆರವು ಮಾಡಬೇಕು. ಶೌಚಾಲಯವನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಕಾಂಕ್ರೀಟ್ ರಸ್ತೆಗೆ ಅನುದಾನ ಬಂದಿಲ್ಲ’
ಸಂತೆ ಮಾರುಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು 15ನೇ ಹಣಕಾಸು ಯೋಜನೆಯಲ್ಲಿ ₹ 10 ಲಕ್ಷಕ್ಕೆ ಟೆಂಡರ್ ಆಗಿತ್ತು. ಅನುದಾನ ಇನ್ನೂ ಬಂದಿಲ್ಲ. ಶೌಚಾಲಯವನ್ನು ಅದಷ್ಟು ಬೇಗ ಜನರ ಬಳಕೆಗೆ ಮುಕ್ತಗೊಳಿಸಲಾಗುವುದು. ತಗಡಿನ ಶೆಡ್ ನಿರ್ಮಾಣಕ್ಕೆ ಈ ವರ್ಷದ ಅನುದಾನದಲ್ಲಿ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಸಂತೋಷ್‌ಕುಮಾರ್ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.