ADVERTISEMENT

ಅನ್ನಸುವಿಧಾ’ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ: ಮಧು ಎಚ್.ಎಂ.

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:31 IST
Last Updated 2 ಜನವರಿ 2026, 5:31 IST
ಶಿವಮೊಗ್ಗದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಚ್.ಎಂ. ಮಧು ಮಾತನಾಡಿದರು
ಶಿವಮೊಗ್ಗದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಚ್.ಎಂ. ಮಧು ಮಾತನಾಡಿದರು   

ಶಿವಮೊಗ್ಗ: 75 ವರ್ಷ ಮೇಲ್ಪಟ್ಟರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ‘ಅನ್ನಸುವಿಧಾ’ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಮಧು ಎಚ್.ಎಂ. ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಭಾರೀ ಪ್ರಮಾಣದಲ್ಲಿ ಯಶಸ್ವಿಯನ್ನು ಪಡೆದು, ಜನಸಾಮಾನ್ಯರ ಜೀವನಕ್ಕೆ ದಾರಿದೀಪವಾಗಿವೆ. ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸದೃಢವಾಗಲು ಸಹಕಾರಿಯಾಗಿವೆ ಎಂದರು. 

ADVERTISEMENT

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೆ.ಜಿ. ಅಕ್ಕಿಯ ಬದಲು ಇಂದಿರಾ ಕಿಟ್ ಯೋಜನೆಯಡಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಾದ ಸಕ್ಕರೆ, ತೊಗರಿ ಬೇಳೆ, ಉಪ್ಪು, ಅಡುಗೆ ಎಣ್ಣೆಯನ್ನು ನೀಡಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 40,260 ಬಿಪಿಎಲ್ ಪಡಿತರ ಚೀಟಿಗಳ ಪರಿಷ್ಕರಣೆ ನೆಡೆದಿದ್ದು, ಈ ಪೈಕಿ 3,026 ಪಡಿತರ ಚೀಟಿಗಳನ್ನು  ಎಪಿಎಲ್‌ಗೆ ಪರಿವರ್ತಿಸಲು ಗುರುತಿಸಲಾಗಿದೆ. 1,213 ಪಡಿತರ ಚೀಟಿಗಳ ಪರಿಷ್ಕರಣೆ ಬಾಕಿ ಇದೆ ಎಂದು ವಿವರಿಸಿದರು. 

ಸಿಡಿಪಿಒ ಗಂಗಾಬಾಯಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯು ಶೇ 97.84ರಷ್ಟು ಪ್ರಗತಿ ಸಾಧಿಸಿದ್ದು, 6ನೇ ಕಂತಿನ ಹಣ ಬಿಡುಗಡೆಯಾಗಿದೆ. ತಾಲ್ಲೂಕಿನಲ್ಲಿ 1,07,722 ಮಹಿಳೆಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. 327 ಮಹಿಳಾ ಫಲಾನುಭವಿಗಳು ಮರಣ ಹೊಂದಿದ ಮಾಹಿತಿ ಸಿಕ್ಕಿದೆ. 280 ಫಲಾನುಭವಿಗಳ ಎನ್.ಪಿ.ಸಿ.ಐ ಬಾಕಿಯಿದೆ. ತಾಲ್ಲೂಕಿನಲ್ಲಿ ಯುವನಿಧಿ ಯೋಜನೆಯಡಿಯಲ್ಲಿ 2,051 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸೆಪ್ಟಂಬರ್ ತಿಂಗಳ ವೇಳೆಗೆ ₹44.77 ಲಕ್ಷ ಹಣ ಫಲಾನುಭವಿಗಳ ಖಾತೆ ಜಮೆಯಾಗಿದೆ ಎಂದರು.

ಪ್ರಾಧಿಕಾರದ ಸದಸ್ಯರು, ನಾಗರಿಕ ಆಹಾರ ಇಲಾಖೆ, ಸಾರಿಗೆ ಇಲಾಖೆ, ನಗರಸಭೆ ಹಾಗೂ ವಿದ್ಯುತ್ಛಕ್ತಿ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

1.54 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್

ತಾಲ್ಲೂಕಿನಲ್ಲಿ 1.83 ಲಕ್ಷ ಮನೆಗಳು ವಿದ್ಯುತ್ ಸಂಪರ್ಕ ಪಡೆದಿದ್ದು 1.54 ಲಕ್ಷ ಮನೆಗಳು ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ  ಫಲಾನುಭವಿಗಳಾಗಿವೆ. ಶೇ 85ರಷ್ಟು ಕುಟುಂಬಗಳು ಯೋಜನೆ ಸದುಪಯೋಗ ಪಡೆದಿವೆ.  ಹೊಸ ಮನೆಗಳಿಗೆ 58 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಶಕ್ತಿ ಯೋಜನೆಯಡಿ ಶೇ 62ರಷ್ಟು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದು ಮಹಿಳೆಯರು ಆರ್ಥಿಕವಾಗಿ ಸಮಾಜಿಕವಾಗಿ ಶೈಕ್ಷಣಿಕವಾಗಿ ಸ್ವಾವಲಂಬಿ ಆಗಿದ್ದಾರೆ ಎಂದು ಮಧು ಎಚ್.ಎಂ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.