ADVERTISEMENT

ಆನವಟ್ಟಿ | ಮಧ್ಯವರ್ತಿಗಳ ಮೋಸ: ಇದ್ದೂ ಇಲ್ಲದಂತಾದ ಎಪಿಎಂಸಿ

ಜಾನುವಾರುಗಳ ವ್ಯಾಪಾರವೂ ಸ್ಥಗಿತ

ರವಿ ಆರ್.ತಿಮ್ಮಾಪುರ
Published 11 ಫೆಬ್ರುವರಿ 2025, 5:31 IST
Last Updated 11 ಫೆಬ್ರುವರಿ 2025, 5:31 IST
ಆನವಟ್ಟಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಹೊರಾಂಗಣ ನೋಟ
ಆನವಟ್ಟಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಹೊರಾಂಗಣ ನೋಟ   

ಆನವಟ್ಟಿ: ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆನವಟ್ಟಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ನಾಲ್ಕು ವರ್ಷದ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಯಿಂದ ಬೀಗ ಬಿದ್ದಿದ್ದು, ರೈತರ ಪಾಲಿಗೆ ಇದ್ದರೂ, ಇಲ್ಲದಂತಾಗಿದೆ. ಎಪಿಎಂಸಿಯ ಗೇಟು ಕಿತ್ತುಹೋಗಿದ್ದು, ಅನ್ಯ ಚಟುವಟಿಕೆಗಳ ತಾಣವಾಗಿದೆ.

ಆನವಟ್ಟಿಯಲ್ಲಿ ಅಂದಾಜು 8 ಎಕರೆ ಜಾಗ ಎಪಿಎಂಸಿಗೆ ಸೇರಿದೆ. ಇಲ್ಲಿ ಜಾನುವಾರುಗಳ ಸಂತೆ (ದನದ ಪೇಟೆ) ನಡೆಯುತ್ತಿತ್ತು. ಕ್ರಮೇಣ ಮಧ್ಯವರ್ತಿಗಳ ಮೋಸದಿಂದ ಜಾನುವಾರುಗಳ ವ್ಯಾಪಾರ ಕಡಿಮೆಯಾಯಿತು. 8 ವರ್ಷದ ಹಿಂದೆ ಜಾನುವಾರುಗಳ ಸಂತೆ ಸ್ಥಗಿತಗೊಂಡಿತು ಎನ್ನುತ್ತಾರೆ ಸ್ಥಳೀಯರು.

ಎಪಿಎಂಸಿಯಲ್ಲಿ ಭತ್ತ ಹಾಗೂ ಜೋಳದ ಖರೀದಿ ಕೇಂದ್ರವೂ ಆರಂಭವಾಗಿತ್ತು. ಹಳೆಯ 2 ಗೋದಾಮುಗಳು ಸಾಕಾಗುತ್ತಿರಲಿಲ್ಲ. 2014ರಲ್ಲಿ ಬೃಹತ್ತಾದ ಮತ್ತೊಂದು ಉಗ್ರಾಣ ನಿರ್ಮಾಣವಾಯಿತು. 2016ರಲ್ಲಿ ಸಾರ್ವಜನಿಕರಿಗೆ ಹಾಗೂ ರೈತರ ಉಪಯೋಗಕ್ಕಾಗಿ ಶುದ್ಧ ನೀರಿನ ಘಟಕ ನಿರ್ಮಾಣವಾಯಿತು.

ADVERTISEMENT

ತೂಕದಲ್ಲಿ ಮೋಸ ಆಗಬಾರದು ಎಂದು ಎಪಿಎಂಸಿಯಲ್ಲಿ 2018ರಲ್ಲಿ ವೇಬ್ರಿಜ್‌ ನಿರ್ಮಾಣವಾಯಿತು. ರೈತರು ಈ ಸೌಲಭ್ಯಗಳ ಉಪಯೋಗ ಪಡೆದುಕೊಳ್ಳುವ ಹೊತ್ತಿಗೆ, ನೂತನ ಕೃಷಿ ಕಾಯ್ದೆಯ ಪರಿಣಾಮವಾಗಿ ಎಲ್ಲವೂ ಸ್ಥಗಿತಗೊಂಡಿತು.

ಖರೀದಿ ಕೇಂದ್ರ ಆರಂಭವಾಗಲಿ: ಈ ವರ್ಷ ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಭತ್ತದ ಖರೀದಿ ಕೇಂದ್ರ ಆರಂಭವಾಗಿದೆ. ಗಡಿ ಭಾಗವಾದ ಆನವಟ್ಟಿ, ಜಡೆ, ಮೂಡಿ, ಅಗಸನಹಳ್ಳಿ, ಭಾರಂಗಿ ಸೇರಿದಂತೆ ತಾಲ್ಲೂಕು ಕೇಂದ್ರವು ರೈತರಿಗೆ 27ರಿಂದ 37 ಕಿ.ಮೀ. ದೂರವಿದೆ. ಸ್ವಂತ ಖರ್ಚಿನಲ್ಲಿ ಬಾಡಿಗೆ ವಾಹನ ತೆಗೆದುಕೊಂಡು ಸೊರಬ ಎಪಿಎಂಸಿಗೆ ರೈತರು ಭತ್ತ ತೆಗೆದುಕೊಂಡು ಹೋಗಬೇಕಿದೆ.

ಎನ್‌ಐಸಿ-ಎಫ್‌ಸಿಎಸ್‌ ತಂತ್ರಾಂಶದ ಮೂಲಕ ಖರೀದಿ ಮಾಡುತ್ತಿದ್ದು, ಎಫ್‌ಎಕ್ಯೂ ಗುಣಮಟ್ಟದ ಭತ್ತವನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ. ಗುಣಮಟ್ಟವಿಲ್ಲದ ಭತ್ತವನ್ನು ದಾಸ್ತಾನು ಖರೀದಿಗೆ ಪರಿಗಣಿಸುವುದಿಲ್ಲ. ಗುಣಮಟ್ಟವಿಲ್ಲದೆ ಖರೀದಿಯಾಗದ ಭತ್ತವನ್ನು ರೈತರು ಸ್ವಂತ ಖರ್ಚಿನಲ್ಲೇ ಮನೆಗೆ ತೆಗೆದುಕೊಂಡು ಹೋಗಬೇಕು. ಹೀಗಾಗಿ ರೈತರು ತಾಲ್ಲೂಕು ಕೇಂದ್ರದಲ್ಲಿ ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಆನವಟ್ಟಿ ಎಪಿಎಂಸಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭವಾಗಲಿ ಎಂಬುವುದು ಆನವಟ್ಟಿ ಭಾಗದ ರೈತರ ಒತ್ತಾಯ.

₹ 3,500 ನೀಡಿ: ಫೆಬ್ರವರಿ 28ರವರೆಗೂ ಭತ್ತ ಖರೀದಿಗೆ ನೋಂದಣಿ ಮಾಡಿಸಲು ಅವಕಾಶವಿದೆ. ಆದರೆ, ಎಂಪಿಎಂಸಿಯಲ್ಲಿ ಕ್ವಿಂಟಲ್‌ ಭತ್ತಕ್ಕೆ ಸಾಮಾನ್ಯ ₹ 2,300, ಎ ಗೇಡ್‌ ₹ 2,320 ನಿಗದಿ ಮಾಡಿದೆ. ಸ್ಥಳೀಯ ಭತ್ತದ ವ್ಯಾಪಾರಿಗಳೇ ₹ 2,300 ಕ್ಕೆ ಭತ್ತ ಖರೀದಿಸುತ್ತಿದ್ದಾರೆ. ಹಳೇ ಭತ್ತ ₹ 3,000ರಿಂದ ₹ 3,500 ಇದೆ. ಆದರೆ, ಸರ್ಕಾರ ಮಾತ್ರ ಹಳೆ ಮತ್ತು ಹೊಸ ಭತ್ತಕ್ಕೆ ಒಂದೇ ಬೆಲೆ ನಿಗದಿ ಮಾಡಿದೆ.

ಭತ್ತ ಬೆಳೆಯಲು ರೈತರಿಗೆ ಕ್ವಿಂಟಲ್‌ಗೆ ₹ 2,000 ಖರ್ಚು ಬರುತ್ತದೆ. ರೈತರಿಂದ ಖರೀದಿ ಮಾಡಿ ಮಧ್ಯವರ್ತಿಗಳು ಲಾಭ ಗಳಿಸುತ್ತಾರೆ. ಆದರೆ, ರೈತರಿಗೆ ಲಾಭ ಸಿಗುವುದಿಲ್ಲ. ಹೀಗಾಗಿ ಸಾಮಾನ್ಯ ಭತ್ತಕ್ಕೆ ₹ 3,000 ಮತ್ತು ಎ ಗ್ರೇಡ್‌ ಭತ್ತಕ್ಕೆ ₹ 3,500 ಬೆಂಬಲಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕು ಎಂಬುದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಶಿವಣ್ಣ ಹುಣಸವಳ್ಳಿ ಅವರ ಕೋರಿಕೆ. 

ಆನವಟ್ಟಿ ಎಪಿಎಂಸಿಯಲ್ಲಿ 2014ರಲ್ಲಿ ನಿರ್ಮಾಣವಾದ ಬೃಹತ್‌ ಗೊಡಾನ್‌.
ತಾಲ್ಲೂಕು ಎಪಿಎಂಸಿ ಕೇಂದ್ರದಲ್ಲಿ ಮಾತ್ರ ಭತ್ತದ ಖರೀದಿ ಕೇಂದ್ರ ತೆರೆಯಲು ಅನುಮತಿ ಇದೆ. ಉಳಿದ ಎಪಿಎಂಸಿಯಲ್ಲಿ ತೆರೆಯಲು ಅನುಮತಿ ಇಲ್ಲ
-ಎಚ್.‌ಆಶಾ, ತಾಲ್ಲೂಕು ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.