ತೀರ್ಥಹಳ್ಳಿ: ಉಪ ವಿಭಾಗಾಧಿಕಾರಿ ನೀಡಿದ ತಡೆಯಾಜ್ಞೆಗೆ ತಾಲ್ಲೂಕು ಕಚೇರಿಯಲ್ಲಿ ಬೆಲೆ ಇಲ್ಲವೇ. ಕೋಡ್ಲುಬೈಲು ಗ್ರಾಮದ ಗೇಣಿದಾರರ ಹೆಸರಿನ ಬದಲು ಬೇರೊಬ್ಬರ ಹೆಸರಿಗೆ ಪಹಣಿ ಖಾತೆ ಮಾಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಮಂಗಳವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಉಪವಿಭಾಗಾಧಿಕಾರಿ ಜಿ.ಎಚ್. ಸತ್ಯನಾರಾಯಣ ಅವರನ್ನು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
‘1974ರ ಹಿಂದೆಯೇ ಗೇಣಿ ಸಾಗುವಳಿ ಚೀಟಿ ನೀಡಲಾಗಿದೆ. ನಿರಂತರವಾಗಿ ಪೌತಿಖಾತೆ ಬದಲಾಯಿಸಲು ಕುಟುಂಬ ಅರ್ಜಿಗಳನ್ನು ನೀಡುತ್ತಿದೆ. ಗೇಣಿಗೆ ಒಳಪಡದಿದ್ದರೆ ಜಮೀನನ್ನು ಸರ್ಕಾರಿ ಭೂಮಿ ಎಂದು ಘೋಷಿಸಿ ಎಂದು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಆದರೆ, ನಮ್ಮ ಅರ್ಜಿಯಿದ್ದ ಸಂದರ್ಭದಲ್ಲೂ ಮತ್ತೊಬ್ಬರ ಹೆಸರಿಗೆ ಖಾತೆಯಾಗಿದೆ ಎಂದು ದೂರುದಾರರು ಅಳಲು ತೋಡಿಕೊಂಡರು.
‘ಮಧ್ಯವರ್ತಿಗಳ ಹಾವಳಿಯಿಂದಾಗಿ ತಾಲ್ಲೂಕು ಕಚೇರಿಯ ಬಗ್ಗೆ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಹಕ್ಕುಪತ್ರಗಳ ದಾಖಲೆಗಳು ಕಚೇರಿಯ ಹೊರಗೆ ಬಿಕಾರಿಯಾಗುತ್ತಿದೆ. 6 ಗುಮಾಸ್ತರ ಬದಲಿಗೆ ಅಕ್ರಮವಾಗಿ ಖಾಸಗಿ ಗುಮಾಸ್ತರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.
‘ಶಾಸನಕನಾಗಿ ಎರಡು ವರ್ಷ ಕಳೆದಿದ್ದರು ಒಂದು ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಹಕ್ಕುಪತ್ರ ನೀಡಲು ಆಗದ ಮೇಲೆ ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಇದ್ದು ಪ್ರಯೋಜನವೇನು. ತಕ್ಷಣವೇ ಬಗರ್‌ಹುಕುಂ ಸಭೆ ನಡೆಸುತ್ತೇನೆ. ಯಾವುದೇ ಅರ್ಜಿಗಳನ್ನು ಕಂದಾಯ ಇಲಾಖೆ ನೀಡದಿದ್ದರೆ ಅದನ್ನೇ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುತ್ತೇನೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ತಿಳಿಸಿದರು.
‘ಅಕ್ರಮವಾಗಿ ಗುಮಾಸ್ತರ ನೇಮಕವಾಗಿದ್ದರೆ ಅಧಿಕಾರಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಗೇಣಿ ಸಾಗುವಳಿ ಸಮಸ್ಯೆಯನ್ನು 10 ದಿನದೊಳಗೆ ಬಗೆಹರಿಸುತ್ತೇವೆ’ ಎಂದು ಉಪ ವಿಭಾಗಾಧಿಕಾರಿ ಜಿ.ಎಚ್. ಸತ್ಯನಾರಾಯಣ ಹೇಳಿದರು.
ಶಿರಸ್ಥೆದಾರ್ ಸತ್ಯಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.