ತೀರ್ಥಹಳ್ಳಿ: ‘ತಾಲ್ಲೂಕಿನಲ್ಲಿ ಬಿಜೆಪಿಯನ್ನು ಗಿಮಿಕ್ ಮಾಡಿ ಕಟ್ಟಿದ್ದಲ್ಲ. ಪ್ರತಿ ಮನೆಯ ಕದ ತಟ್ಟಿ, ಅವರ ಬಡತನ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದೇನೆ. ಶಾಸಕನಾದ ನಂತರ ಕ್ಷೇತ್ರದ ಜನತೆಗಾಗಿ ಪ್ರಾಮಾಣಿಕವಾಗಿ ನ್ಯಾಯ ಕೊಡಿಸಿದ್ದೇನೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶುಕ್ರವಾರ ಬಂಟರ ಭವನದಲ್ಲಿ ಆಯೋಜಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋಣಂದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಂಗಳಗೋಪಿ, ಕಲ್ಗದ್ದೆ ರತ್ನಾಕರ ಎರಡು ದೊಡ್ಡ ಶಕ್ತಿಗಳು. ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದಾಗ ಹಗಲು ರಾತ್ರಿ ನಿದ್ದೆ ಬಂದಿರಲಿಲ್ಲ. ಅವರನ್ನು ಕರೆತರು ಪ್ರಯತ್ನ ನಡೆದೇ ಇತ್ತು’ ಎಂದರು.
ಸಾವಿರಾರು ವರ್ಷಗಳ ಬದುಕಿನ ಸಹಿಷ್ಣುತೆ ಆಧಾರದಲ್ಲಿ ಹಿಂದೂ ಧರ್ಮ ಹುಟ್ಟಿದೆ. ರಾಜ್ಯವನ್ನು ಜಾತಿ ವ್ಯವಸ್ಥೆಯ ಮೇಲೆ ಒಡೆಯುವ ಪ್ರಯತ್ನ ನಡೆಯುತ್ತಿದೆ. ಜಾತಿ, ಭಾಷೆ ತಾರತಮ್ಯ ಸರಿಯಲ್ಲ. ರಾಷ್ಟ್ರವನ್ನು ಒಗ್ಗೂಡಿಸುವಲ್ಲಿ ಎಲ್ಲರ ಯೋಗದಾನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
‘ಉತ್ತಮ ವಿಚಾರಕ್ಕಾಗಿ ಸಾವಿರಾರು ಜನ ಕೆಲಸ ಮಾಡುತ್ತಿದ್ದೇವೆ. ಪಕ್ಷ ಸೇರ್ಪಡೆ ಎಂದರೆ ಕೂಲಿ ಇಲ್ಲದೆ ಪಕ್ಷದ ಕೆಲಸ ಮಾಡುವುದಾಗಿದೆ. ಅಧಿಕಾರ ಪಡೆದವರು ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಬೇಕು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆದ್ದೂರು ನವೀನ್ ಹೇಳಿದರು.
‘ಕಾಂಗ್ರೆಸ್ ಸೇರ್ಪಡೆಯಾಗಿ ಪಶ್ಚಾತ್ತಾಪಕ್ಕೆ ಸಿಲುಕಿದ್ದೆ. ನನ್ನ ಮನೆಯಲ್ಲಿ ಇಂದಿಗೂ ಬಿಜೆಪಿಗೆ ಮತ ನೀಡುತ್ತಾರೆ. ರಾಜಕೀಯ ಬೇಡ ಎಂದು ತೀರ್ಮಾನಿಸಿದ್ದೆ. ಕಲ್ಗದ್ದೆ ರತ್ನಾಕರನಿಗೆ ಮಾತು ಕೊಟ್ಟಿದ್ದೆ. ಅಲ್ಲಿ ಅನ್ಯಾಯವಾಗಿದ್ದಕ್ಕೆ ಬೇಸರದಿಂದ ಕಾಂಗ್ರೆಸ್ ತ್ಯಜಿಸಿದ್ದೇನೆ’ ಎಂದು ಬಿಜೆಪಿ ಸೇರ್ಪಡೆಗೊಂಡ ಕೋಣಂದೂರು ಗ್ರಾಮ ಪಂಚಾಯಿತಿ ಸದಸ್ಯ ಮಂಗಳ ಗೋಪಿ ಹೇಳಿದರು.
ಪ್ರಮುಖರಾದ ನಾಗರಾಜ ಶೆಟ್ಟಿ, ಅಶೋಕ್ ಮೂರ್ತಿ, ಚಂದುವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ರಕ್ಷಿತ್ ಮೇಗರವಳ್ಳಿ, ಜನಗಲ್ ರಾಮಚಂದ್ರ, ಯಶೋಧ ಮಂಜುನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.