ADVERTISEMENT

ಗೋಮಾಂಸ ಸಾಗಣೆ ಆರೋಪಿಗಳ ಬಂಧನ: ಪೊಲೀಸ್ ಠಾಣೆ ಎದುರು ಗಲಭೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 8:02 IST
Last Updated 1 ಜುಲೈ 2023, 8:02 IST
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಠಾಣೆ ಎದುರಿನ ಗಲಭೆಯ ಮಾಹಿತಿ ಪಡೆದರು
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಠಾಣೆ ಎದುರಿನ ಗಲಭೆಯ ಮಾಹಿತಿ ಪಡೆದರು   

ಶಿಕಾರಿಪುರ: ತಾಲ್ಲೂಕಿನ ಪುನೇದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಅಕ್ರಮ ಗೋಮಾಂಸ ಸಾಗಣೆ ಸಂಬಂಧ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಎರಡು ಕೋಮುಗಳ ಯುವಕರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಇಬ್ಬರು ಯುವಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿಕಾರಿಪುರಕ್ಕೆ ಬೈಕ್ ಹಾಗೂ ಆಟೊದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಣೆ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ್ದ ಬಂಜಾರ ಸಮಾಜ ಮುಖಂಡ ರಾಘವೇಂದ್ರನಾಯ್ಕ, ಹಾಗೂ ಕೆಲ ಯುವಕರು ಪೊಲೀಸ್ ನೈತಿಕಗಿರಿ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಯುವಕರ ಮಧ್ಯೆ ವಾಗ್ವಾದವೂ ನಡೆದಿ‌ತ್ತು. ಪೊಲೀಸರು ನೈತಿಕಗಿರಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರನಾಯ್ಕ ವಿಡಿಯೊ ಹಂಚಿಕೊಂಡಿದ್ದರು.

ADVERTISEMENT

ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು ಗೋಮಾಂಸ ಸಾಗಣೆ ಕುರಿತು ಆರೋಪಿಗಳನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಆಗ ಎರಡು ಕೋಮಿನ ಯುವಕರು ಠಾಣೆ ಎದುರು ಜಮಾಯಿಸಿ ವಾಗ್ವಾದ ನಡೆಸಿದರು. ಆಗ ಪರಸ್ಪರ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಂಚಿಕೊಪ್ಪ ಗ್ರಾಮದ ಮಂಜುನಾಥ್ ಹಾಗೂ ಶಿಕಾರಿಪುರದದ ಆರ್‌ಎಸ್ಎಸ್‌ ಕಾರ್ಯಕರ್ತ ಪ್ರದೀಪ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಘಟನೆಯ ಮಾಹಿತಿ ಪಡೆದರು.

‘ಪೊಲೀಸ್ ಠಾಣೆ ಎದುರು ಗಲಭೆಗೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆಯ ಮುಂಭಾಗವೇ ಯುವಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ರಾಘವೇಂದ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರಿಗೆ ಸೂಚಿಸಿದರು.

‘ಗೋಮಾಂಸ ಸಾಗಣೆ ವಿರುದ್ಧ ಪೊಲೀಸ್ ನೈತಿಕಗಿರಿ ಮಾಡಿದ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ಕೋಮಿನ ಪರ ತನಿಖೆ ನಡೆಯಬಾರದು‘ ಎಂದು ಪುರಸಭೆ ಸದಸ್ಯ ಎಸ್.ಪಿ. ನಾಗರಾಜಗೌಡ ಮನವಿ ಮಾಡಿದರು.

‘ಗೋಮಾಂಸ ಸಾಗಣೆ ಹಾಗೂ ಠಾಣೆ ಎದುರಿನ ಗಲಭೆ ಸಂಬಂಧ ‌ಮಾಹಿತಿ ಪಡೆದು ಪ್ರಾಮಾಣಿಕವಾಗಿ ತನಿಖೆ ಮಾಡುತ್ತೇವೆ. ಪಟ್ಟಣದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಯಾರು ಮಾಡಬಾರದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದರು.

ಅರೋಪಿಗಳ ವಿರುದ್ಧ ಪ್ರಕರಣ: ಗೋಮಾಂಸ ಸಾಗಣೆ ಆರೋಪದ ಸಂಬಂಧ ಶಿಕಾರಿಪುರದ ಮಹಮದ್ ಅಫ್ಸರ್,ನಿಸಾರ್ ಅಹಮದ್, ಶಿರಾಳಕೊಪ್ಪ ನಿವಾಸಿಗಳಾದ ರಿಜ್ವಾನ್, ಸುಲ್ತಾನ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಸಂಸದ ಬಿ.ವೈ. ರಾಘವೇಂದ್ರ ಭೇಟಿ ಹಲ್ಲೆಗೊಳಗಾದ ಹಿಂದೂ ಯುವಕರ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.