ADVERTISEMENT

‘ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’

ರಂಗಾಯಣದಲ್ಲಿ 15 ದಿನಗಳ ಶಿಲ್ಪಕಲಾ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:38 IST
Last Updated 21 ಜನವರಿ 2021, 2:38 IST
ಶಿವಮೊಗ್ಗ ರಂಗಾಯಣದಲ್ಲಿ ನಡೆಯಲಿರುವ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಬುಧವಾರ ಹಿರಿಯ ಶಿಲ್ಪಕಲಾವಿದ ಕೆ. ಜ್ಞಾನೇಶ್ವರ್ ಉದ್ಘಾಟಿಸಿದರು
ಶಿವಮೊಗ್ಗ ರಂಗಾಯಣದಲ್ಲಿ ನಡೆಯಲಿರುವ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಬುಧವಾರ ಹಿರಿಯ ಶಿಲ್ಪಕಲಾವಿದ ಕೆ. ಜ್ಞಾನೇಶ್ವರ್ ಉದ್ಘಾಟಿಸಿದರು   

ಶಿವಮೊಗ್ಗ: ನಾಡಿನ ಕಲಾ ಪರಂಪರೆ ಉಳಿಸುವಲ್ಲಿ ಶಿಲ್ಪ ಕಲಾವಿದರ ಪಾತ್ರ ಬಹಳ ಮುಖ್ಯವಾಗಿದ್ದು, ಇಂತಹ ಕಲೆಯನ್ನು ಪ್ರೋತ್ಸಾಹಿಸಿ, ಉಳಿಸಿ– ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಶಿಲ್ಪ ಕಲಾವಿದ ಕೆ. ಜ್ಞಾನೇಶ್ವರ್ ಹೇಳಿದರು.

ರಂಗಾಯಣದಲ್ಲಿ 15 ದಿನಗಳ ಕಾಲ ನಡೆಯಲಿರುವ ಸಿಮೆಂಟ್ ಶಿಲ್ಪಕಲಾ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಲ್ಪ ಕಲಾವಿದರಿಗೆ ಸ್ಥಳೀಯವಾಗಿ ಹೆಚ್ಚಿನ ಅವಕಾಶ ದೊರೆಯುವಂತೆ ಮಾಡಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ’ ಎಂದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ‘ಅಕಾಡೆಮಿಯಿಂದ ನಾಡಿನ ವಿವಿಧ ಭಾಗಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕಲಾವಿದರು ಶಿಬಿರ ಎಂದು ಅಸಡ್ಡೆ ತೋರದೆ ತಮ್ಮ ಕೈಚಳಕದ ಮೂಲಕ ಕಲಾಕೃತಿಗಳಿಗೆ ಜೀವ ತುಂಬಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ‘ಶಿವಮೊಗ್ಗ ರಂಗಾಯಣದಲ್ಲಿ ಆವರಣದಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಬಯಲು ರಂಗಮಂದಿರ, ಉದ್ಯಾನ, ಶಿಲ್ಪಕಲಾಕೃತಿಗಳು ಸೇರಿ ಆವರಣವನ್ನು ಪರಿಪೂರ್ಣವಾಗಿ ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದರ ಭಾಗವಾಗಿ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಸಿಮೆಂಟ್ ಕಲಾ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ವಂದಿಸಿದರು. ಶಿಬಿರದ ನಿರ್ದೇಶಕ ಕೆ. ನಾರಾಯಣ ರಾವ್, ಅಕಾಡೆಮಿಯ ಸದಸ್ಯ ಸಂಚಾಲಕ ವಿಪಿನ್ ಭದೌರಿಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇದ್ದರು.

ಜಾನಪದ ಸೊಗಡು ಬಿಂಬಿಸುವ ಕಲಾಕೃತಿ: ಸಿಮೆಂಟ್ ಶಿಲ್ಪ ಕಲಾ ಶಿಬಿರದಲ್ಲಿ 15 ಮಂದಿ ಹಿರಿಯ ಶಿಲ್ಪಿಗಳು ಮತ್ತು 15 ಮಂದಿ ಸಹಾಯಕ ಶಿಲ್ಪಿಗಳು ಭಾಗವಹಿಸುತ್ತಿದ್ದಾರೆ. ಕನ್ನಡ ರಂಗಭೂಮಿಯ ಹೆಸರಾಂತ ನಾಟಕಗಳ ದೃಶ್ಯಗಳು, ಜಾನಪದ ಸೊಗಡು ಬಿಂಬಿಸುವ ಕಲಾಕೃತಿಗಳು, ಭೂತದ ಕೋಲ, ಯಕ್ಷಗಾನದ ಕಲಾಕೃತಿಗಳು, ಭರತನಾಟ್ಯ, ಕೂಚುಪುಡಿಯಂತಹ ನೃತ್ಯ ಪ್ರಕಾರಗಳ 20ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.