ADVERTISEMENT

ಅರಣ್ಯಾಧಿಕಾರಿಗಳ ದೌರ್ಜನ್ಯ: ಜಿಲ್ಲಾಧಿಕಾರಿ ಭೇಟಿಗೆ ಗ್ರಾಮಸ್ಥರ ಪಟ್ಟು

ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ರೈತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:33 IST
Last Updated 8 ಆಗಸ್ಟ್ 2022, 4:33 IST
ಅರಣ್ಯಾಧಿಕಾರಿಗಳ ‌ದೌರ್ಜನ್ಯ ಖಂಡಿಸಿ ಕಾರ್ಗಲ್ ಅರಣ್ಯಾಧಿಕಾರಿ ಕಚೇರಿಯಲ್ಲಿ ಉರುಳುಗಲ್ಲು ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದರು
ಅರಣ್ಯಾಧಿಕಾರಿಗಳ ‌ದೌರ್ಜನ್ಯ ಖಂಡಿಸಿ ಕಾರ್ಗಲ್ ಅರಣ್ಯಾಧಿಕಾರಿ ಕಚೇರಿಯಲ್ಲಿ ಉರುಳುಗಲ್ಲು ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದರು   

ಕಾರ್ಗಲ್: ಅರಣ್ಯ ಇಲಾಖೆ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಸಮೀಪದ ಬಿಳಿಗಾರು ಕುಗ್ರಾಮದಿಂದ ಕಾರ್ಗಲ್ ಪಟ್ಟಣದ ಅರಣ್ಯಾಧಿಕಾರಿ ಕಚೇರಿಯವರೆಗೆ ಉರುಳುಗಲ್ಲು ಗ್ರಾಮಸ್ಥರು ಈಚೆಗೆ 22 ಕಿ.ಮೀ. ಪಾದಯಾತ್ರೆ ನಡೆಸಿದರು.

ಅಹೋರಾತ್ರಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೂ ಆಗಸ್ಟ್‌ 12ರಂದು ಡಿಸಿ ಭೇಟಿ ನೀಡುವ ಭರವಸೆ ನೀಡಿದ ಕಾರಣ ಪ್ರತಿಭಟನೆ ಕೈಬಿಟ್ಟರು.

ಬೆಳಿಗ್ಗೆ 10ಕ್ಕೆ ಹೊರಟ ಪಾದಯಾತ್ರೆಯಲ್ಲಿ ಸಾವಿರಾರು ಅರಣ್ಯವಾಸಿಗಳು ಜೊತೆಗೂಡಿದರು. ನೂರಾರು ಮಹಿಳೆಯರು ಮಕ್ಕಳು ಭಾಗಿಯಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇರಾತ್ರಿ 12ರವರೆಗೂ ಪ್ರತಿಭಟನೆ ನಡೆಸಿ
ದರು. ಯಾವುದೇ ಅಧಿಕಾರಿಗಳು ಅಹವಾಲು ಕೇಳಲು ಬರದಿದ್ದಾಗ ಆಕ್ರೋಶಗೊಂಡ ರೈತರು ಅರಣ್ಯಾಧಿಕಾರಿ ಕಚೇರಿಯ ಮೇಲ್ಭಾಗಕ್ಕೆ ಹತ್ತಲು ಪ್ರಯತ್ನಿಸಿದರು. ಪ್ರತಿಭಟನಕಾರರ ತಾಳ್ಮೆ ಕಟ್ಟೆಯೊಡೆಯುತ್ತಿದ್ದುದನ್ನು ಗಮನಿಸಿದ ಸಿಪಿಐ ಕೃಷ್ಣಪ್ಪ ಮತ್ತು ಕಾರ್ಗಲ್ ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್‌ ಮನವೊಲಿಸಿ ಕಚೇರಿ ಏರುವುದನ್ನು ತಡೆದರು.

ADVERTISEMENT

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸಾಗರ ತಹಶೀಲ್ದಾರ್ ಸ್ಥಳಕ್ಕೆ ಬಂದು ಭರವಸೆ ನೀಡಿ, ಮನವೊಲಿಸಿದರು.

ಸಂಪರ್ಕ ಕಡಿತ

ಕಾರ್ಗಲ್: ಮಳೆಯಿಂದಾಗಿ ಮೂರು ದಿನಗಳಿಂದ ಉರುಳುಗಲ್ಲು ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಗ್ರಾಮದ ಮಾರ್ಗದಲ್ಲಿ ರಸ್ತೆ ಮೇಲೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ. ಮರ ತೆರವು
ಗೊಳಿಸಬೇಕಾದ ಅರಣ್ಯ ಇಲಾಖೆ ಇತ್ತ ತಲೆಹಾಕಿಲ್ಲ. ಗ್ರಾಮಸ್ಥರೇ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳ ಭಯ ಕಾಡುತ್ತಿದೆ. ಮರ ತೆರವುಗೊಳಿಸಿದರೆ ಮುಂದೇನು ಕಾದಿದೆಯೋ ಎಂಬ ಆತಂಕದಿಂದ ಮೌನವಾಗಿದ್ದಾರೆ ಎಂದು ಭಾನುಕುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮರಾಜ ಕೋಮಿನಕುರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.