ADVERTISEMENT

ಎಂಡಿಎಫ್ ಪದಾಧಿಕಾರಿಗಳ ಮೇಲಿನ ಹಲ್ಲೆಗೆ ಶಾಸಕ ಹಾಲಪ್ಪ ಕುಮ್ಮಕ್ಕೇ ಕಾರಣ: ಬೇಳೂರು

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 1:52 IST
Last Updated 30 ಮಾರ್ಚ್ 2022, 1:52 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ‘ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಪಾದ ಹೆಗಡೆ ನಿಸರಾಣಿ ಹಾಗೂ ಜಗದೀಶ ಗೌಡ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಶಾಸಕ ಹರತಾಳು ಹಾಲಪ್ಪ ಅವರು ನೀಡಿರುವ ಕುಮ್ಮಕ್ಕೇ ಕಾರಣ’ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಡಿಎಫ್‌ನ ಬೈಲಾದ ಪ್ರಕಾರ ಶಾಸಕರು ಸಭೆಯಲ್ಲಿ ಭಾಗವಹಿಸಬಹುದಷ್ಟೆ, ಅಲ್ಲಿ ಮತ ಚಲಾಯಿಸುವ ಅಥವಾ ನಿರ್ಣಯದಲ್ಲಿ ಪಾಲ್ಗೊಳ್ಳುವ ಅಧಿಕಾರ ಇಲ್ಲ. ಆದರೆ ಹಿಟ್ಲರ್ ಮಾದರಿಯ ಆಡಳಿತವನ್ನು ಅನುಸರಿಸುತ್ತಿರುವ ಹಾಲಪ್ಪ ಎಂಡಿಎಫ್ ಸಭೆಗೆ ತಮ್ಮ ಗೂಂಡಾ ಪಡೆಗಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದನ್ನು ನೋಡಿದರೆ ಹಲ್ಲೆ ಪ್ರಕರಣ ಪೂರ್ವನಿಯೋಜಿತ ಎಂಬುದು ಸ್ಪಷ್ಟವಾಗುತ್ತದೆ’ ಎಂದು ದೂರಿದರು.

‘ಹಾಲಪ್ಪ ಬೆಂಬಲಿಗರು ಶ್ರೀಪಾದ ಹೆಗಡೆ ನಿಸರಾಣಿ ಹಾಗೂ ಜಗದೀಶ ಗೌಡ ಅವರ ಎದೆಯ ಮೇಲೆ ಕಾಲಿಟ್ಟು ತುಳಿದಿದ್ದಾರೆ. ಶ್ರೀಪಾದ ಅವರ ಹೆಂಡತಿ ಮತ್ತು ಮಕ್ಕಳ ಎದುರೇ ಹಲ್ಲೆ ನಡೆದಿದೆ. ಈ ಬಗ್ಗೆ ವಿಡಿಯೊ ಸಾಕ್ಷ್ಯವಿದ್ದರೂ ಪೊಲೀಸರು ಈವರೆಗೂ ಹಲ್ಲೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ಇಲ್ಲಿನ ಪೊಲೀಸ್ ಅಧಿಕಾರಿಗಳು ಹಾಲಪ್ಪ ಅವರ ಚೇಲಾ ರೀತಿ ವರ್ತಿಸುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ’ ಎಂದರು.

ADVERTISEMENT

‘ಎಂಡಿಎಫ್‌ನಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶಾಸಕರಾದವರು ಆ ಬಗ್ಗೆ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಹಲ್ಲೆ ನಡೆಸುವ ಅಧಿಕಾರವನ್ನು ಹಾಲಪ್ಪ ಅವರಿಗೆ ಯಾರು ನೀಡಿದ್ದಾರೆ’ ಎಂದು ಪ್ರಶ್ನಿಸಿದ ಅವರು, ‘ಭವಿಷ್ಯದಲ್ಲಿ ಎಂಡಿಎಫ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ದುರುದ್ದೇಶದಿಂದ ಅವರು ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ನಡುವಿನ ಸಂಬಂಧದಲ್ಲಿ ಹುಳಿ ಹಿಂಡಿ ಅಲ್ಲಿಯ ಅಧಿಕಾರವನ್ನು ಪಡೆಯಲು ಹಾಲಪ್ಪ ಮುಂದಾಗಿದ್ದರು. ನಗರದ ಮಾರಿಕಾಂಬಾ ದೇವಸ್ಥಾನದ ಆಡಳಿತದಲ್ಲೂ ಅವರು ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ಪ್ರಮುಖರಾದ ಅನಿತಾಕುಮಾರಿ, ಗಣಪತಿ ಮಂಡಗಳಲೆ, ಸಂತೋಷ್ ಸದ್ಗುರು, ತಾರಾಮೂರ್ತಿ, ಅನ್ವರ್ ಭಾಷಾ, ಯಶವಂತ ಫಣಿ, ಸೋಮಶೇಖರ್ ಲ್ಯಾವಿಗೆರೆ, ಗಲ್ಲಿ ವೆಂಕಟೇಶ್, ನಾರಾಯಣಪ್ಪ ಇದ್ದರು.

ಮದುವೆ ಮಂಟಪವಾಗಿರುವ ಸಂತೆ ಮೈದಾನ: ಟೀಕೆ

‘ಸರ್ಕಾರದ ಹಣದಿಂದ ನಿರ್ಮಾಣಗೊಂಡಿರುವ ಇಂದಿರಾಗಾಂಧಿ ಕಾಲೇಜು ಪಕ್ಕದ ಸಂತೆ ಮೈದಾನವನ್ನು ಉದ್ಘಾಟನೆ ಮಾಡುವ ಬದಲು ಶಾಸಕ ಹಾಲಪ್ಪ ಅವರು ಈ ಜಾಗವನ್ನು ತಮ್ಮ ಮಕ್ಕಳ ಮದುವೆಗೆ ಬಳಸಿಕೊಳ್ಳುತ್ತಿದ್ದಾರೆ. ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕಾಗಿ ಸರ್ಕಾರದ ಜಾಗವನ್ನು, ಸ್ವಚ್ಛತೆಗೆ ಪೌರ ಕಾರ್ಮಿಕರನ್ನು ಬಳಸಿಕೊಳ್ಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಗಣಪತಿ ಕೆರೆ ಅಭಿವೃದ್ಧಿ ಮಾಡಿರುವುದಾಗಿ ಹಾಲಪ್ಪ ಅವರು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಕೆರೆ ಒತ್ತುವರಿದಾರರ ಪಟ್ಟಿಯಲ್ಲಿ ಶಾಸಕರ ಹೆಸರೂ ಇದೆ. ಕೆರೆ ಒತ್ತುವರಿ ತೆರವು ಬಗ್ಗೆ ಆಡಳಿತ ವಿಫಲಗೊಂಡಿದೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಲ್ಲಿ ನಡೆದ ಬಹಿರಂಗ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಶಾಸಕರು ಸ್ಪಷ್ಟನೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.