ADVERTISEMENT

ಆಗಿನ ಕಾಲವೇ ಚೆನ್ನಾಗಿತ್ತು, ಈಗ ಬಹಳ ಕೆಟ್ಟಿದೆ: ಹೋರಾಟಗಾರ ನಂಜುಂಡಪ್ಪ

ಚಿಕ್ಕಮಗಳೂರು ಜೈಲಿನಲ್ಲಿದ್ದ ಸ್ವಾತಂತ್ರ್ಯ ಯೋಧ ನಂಜುಂಡಪ್ಪ

ವೆಂಕಟೇಶ ಜಿ.ಎಚ್.
Published 12 ಆಗಸ್ಟ್ 2022, 5:35 IST
Last Updated 12 ಆಗಸ್ಟ್ 2022, 5:35 IST
ಬಿ.ಎಂ.ನಂಜುಂಡಪ್ಪ
ಬಿ.ಎಂ.ನಂಜುಂಡಪ್ಪ   

ಶಿವಮೊಗ್ಗ: ‘ಅದು 1942ನೇ ಇಸವಿ. ದೇಶದಾದ್ಯಂತ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದ ಕಾವು. ಅವು ಬೀರೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ಮುಂಬೈನಲ್ಲಿದ್ದ ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ‘ಮಾಡು ಇಲ್ಲವೇ ಮಡಿ‘ ಹೋರಾಟಕ್ಕೆ ಕರೆ ನೀಡಿದ್ದರು. ನಮ್ಮೂರಿನ ಹೋರಾಟಗಾರ ಎಂ.ಎನ್. ಜೋಯಿಸ್ ಅವರ ಜೊತೆಗೂಡಿ ನಾವು ಶಾಲೆಯ ಹುಡುಗರು ಪ್ರಭಾತ್‌ ಪೇರಿ ನಡೆಸಿ ಬ್ರಿಟಿಷರ ವಿರುದ್ಧ ಘೋಷಣೆ ಕೂಗಿದೆವು. ಎಂಟು ಜನರು ನಮ್ಮನ್ನು ಬಂಧಿಸಿ ಚಿಕ್ಕಮಗಳೂರು ಜೈಲಿಗೆ ಹಾಕಿದ್ದರು. ಅಲ್ಲಿ ಮೂರೂವರೆ ತಿಂಗಳ ಸೆರೆವಾಸ. ಮುಂದೆ ಬೆಂಗಳೂರು ಜೈಲಿಗೆ ಕಳುಹಿಸಿದರು. ಅಲ್ಲಿ ಹೋರಾಟಗಾರ ದಾಸಪ್ಪ ಅವರೊಂದಿಗೆ ಒಂದೇ ಸೆಲ್‌ನಲ್ಲಿದ್ದೆ...’

ಇಲ್ಲಿನ ವೆಂಕಟೇಶ ನಗರದ ನಿವಾಸದಲ್ಲಿ ಗುರುವಾರ ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ.ನಂಜುಂಡಪ್ಪ ‘ಪ್ರಜಾವಾಣಿ’ ಎದುರು ತಮ್ಮ ಹೋರಾಟದ ದಿನಗಳ ನೆನಪನ್ನು ಬಿಚ್ಚಿಟ್ಟಿದ್ದು ಹೀಗೆ.

ನಂಜುಂಡಪ್ಪ ಅವರಿಗೆ ಈಗ 98ರ ಹರೆಯ. ಆರೋಗ್ಯ ಕೈಕೊಟ್ಟಿದ್ದರೂ ಊರುಗೋಲಿನ ಸಹಾಯದಿಂದ ಎದ್ದು ಓಡಾಡುತ್ತಾರೆ. ಸ್ಮರಣಶಕ್ತಿ ಚೆನ್ನಾಗಿದೆ. ಆದರೆ, ಸ್ಪಷ್ಟವಾಗಿ ಮಾತನಾಡಬೇಕೆಂದರೆ ನಾಲಿಗೆ ಸಹಕರಿಸುವುದಿಲ್ಲ. ಆದರೂ ನಿಧಾನವಾಗಿ ಆ ದಿನಗಳತ್ತ ಹೊರಳಿದರು.

ADVERTISEMENT

‘ತೀರ್ಥಹಳ್ಳಿಗೆ ಚಿಕಿತ್ಸೆಗೆಂದು ಹೊರಟಿದ್ದ ಮಹಾತ್ಮರು (ಗಾಂಧೀಜಿ) ಶಿವಮೊಗ್ಗದ ಮೂಲಕ ಸಾಗಿದ್ದರು. ಅವರನ್ನು ನೋಡಲು ನಾವು ಬೀರೂರಿನಿಂದ ಬಂದಿದ್ದೆವು. ಶಿವಮೊಗ್ಗದಲ್ಲಿ ಅವರು ಉಳಿದಿದ್ದ ಸ್ಥಳದಲ್ಲಿ ಎರಡು ತೆಂಗಿನ ಗಿಡ ನೆಟ್ಟಿದ್ದರು. ಅವು ಈಗ ಹೆಮ್ಮರವಾಗಿ ಬೆಳೆದಿವೆ. ಮುಂದೆ ಈಚಲು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದೆವು’ ಎಂದು ಸ್ಮರಿಸಿದರು.

ಆ ಕಾಲದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ಬಿ.ಎಂ. ನಂಜುಂಡಪ್ಪ, ಸ್ವಾತಂತ್ರ್ಯದ ನಂತರ ಶಿವಮೊಗ್ಗದ ತಾಲ್ಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಅಕ್ರಮ ಧಾನ್ಯ ಸಾಗಣೆ ತಡೆದು ದಂಡ ವಿಧಿಸಲು ಹೋದಾಗ ಗುತ್ತಿಗೆದಾರ ಲಂಚದ ಆಮಿಷ ಒಡ್ಡುತ್ತಾರೆ. ಲಂಚದ ಹಣ ನಿರಾಕರಿಸಿ ಜನಪ್ರತಿನಿಧಿಯೊಬ್ಬರ ಅವಕೃಪೆಗೆ ಒಳಗಾಗುತ್ತಾರೆ.
ಹೀಗಾಗಿ ಕೆಲಸ ಬಿಟ್ಟು ಕೆಲ ಕಾಲ ಕೃಷಿಯಲ್ಲಿ, ನಂತರ ವ್ಯಾಪಾರದಲ್ಲಿ ತೊಡಗಿದ್ದರು. ನಂಜುಂಡಪ್ಪ ಅವರಿಗೆ ಇಬ್ಬರು ಪುತ್ರರು, ಒಬ್ಬರು ಪುತ್ರಿ, ಆರು ಮಂದಿ ಮೊಮ್ಮಕ್ಕಳು ಇದ್ದಾರೆ. ಪತ್ನಿ ಐದು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.

‘ಈಗ ಕಾಲ ಬಹಳ ಕೆಟ್ಟಿದೆ. ಆಗ ಹಿಂಗಿರಲಿಲ್ಲ. ಅಧಿಕಾರಿಗಳು ಲಂಚ ಕೇಳುತ್ತಿರಲಿಲ್ಲ. ಈಗ ಎಲ್ಲೆಲ್ಲೂ ಲಂಚದ ಹಾವಳಿ’ ಎಂದು ನಂಜುಂಡಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಜಿಲ್ಲಾಡಳಿತದ ಪರವಾಗಿ ಬಿ.ಎಂ.ನಂಜುಂಡಪ್ಪ ಅವರ ಮನೆಗೆ ತೆರಳಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅವರನ್ನು ಗೌರವಿಸಿ ಬಂದಿದ್ದಾರೆ.

‘ಲಂಚ ಕೊಟ್ಟ ಮೇಲೆ ಕೆಲಸ ಆಯ್ತು’
‘ನಮ್ಮ ಮನೆಯ ಖಾತೆ ದಾಖಲೆಯಲ್ಲಿನ ಲೋಪ ತಿದ್ದುಪಡಿ ಮಾಡಿಸಲು ತಾಲ್ಲೂಕು ಕಚೇರಿಗೆ ತೆರಳಿದ್ದೆ. ಈ ಮೊದಲು ಅಲ್ಲಿನ ಸಿಬ್ಬಂದಿ ಮಾಡಿದ್ದ ತಪ್ಪಿನಿಂದಲೇ ದಾಖಲೆಯಲ್ಲಿ ತಪ್ಪು ಮಾಹಿತಿ ನಮೂದಾಗಿತ್ತು. ಅದನ್ನು ಸರಿಪಡಿಸಲು ತಿಂಗಳುಗಟ್ಟಲೇ ಕಚೇರಿಗೆ ಓಡಾಡಬೇಕಾಯಿತು. ಇದು ಸ್ವಾತಂತ್ರ್ಯ ಹೋರಾಟಗಾರ ನೆಲೆಸಿರುವ ಮನೆ ಎಂದು ಹೇಳಿದರೂ ಅಲ್ಲಿನ ಸಿಬ್ಬಂದಿ ಸೊಪ್ಪು ಹಾಕಲಿಲ್ಲ. ಅವರ ಎದುರು ನಮ್ಮ ಮನವಿ, ಅಪ್ಪನ ಆದರ್ಶದ ಬದುಕು ಏನೂ ನಡೆಯಲಿಲ್ಲ. ಹಣ ಕೊಟ್ಟಾಗಲೇ ಕೆಲಸ ಆಯಿತು. ಆಗ ಸಣ್ಣ ತಿದ್ದುಪಡಿ ಮಾಡಿಸಲು ಐದಾರು ಸಾವಿರ ರೂಪಾಯಿ ಖರ್ಚು ಮಾಡಬೇಕಾಯಿತು’ ಎಂದು ನಂಜುಂಡಪ್ಪ ಅವರ ಪುತ್ರ ವಸಂತ್ ಬೇಸರ ವ್ಯಕ್ತಪಡಿಸಿದರು.

‘ಅಪ್ಪ ಸ್ವಾತಂತ್ರ್ಯ ಹೋರಾಟಗಾರರು ಎಂದು ನೀವು ಮಾಧ್ಯಮದವರು ಅವರ ಬಗ್ಗೆ ಬರೆಯುತ್ತೀರಿ. ಜಿಲ್ಲಾಧಿಕಾರಿ ಮನೆಗೆ ಬಂದು ಗೌರವಿಸುತ್ತಾರೆ. ಆದರೆ, ಅವರು ಮಾಡಿದ್ದ ಹೋರಾಟಕ್ಕೆ ಶಿವಮೊಗ್ಗದ ತಾಲ್ಲೂಕು ಕಚೇರಿಯಲ್ಲೂ ಮನ್ನಣೆ ಸಿಗಲಿಲ್ಲ’ ಎಂದು ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.