ADVERTISEMENT

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಅವಾಂತರ: ಬೇರೆಯವರ ಮಗು ಅಂತ್ಯಕ್ರಿಯೆ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:02 IST
Last Updated 6 ನವೆಂಬರ್ 2020, 19:02 IST
ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ
ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ    

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ನೀಡಿದ ಮೃತ ಮಗುವನ್ನೇ ತಮ್ಮ ಮಗುವೆಂದು ಭಾವಿಸಿ ಸಾಗರದ ದಂಪತಿ ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮಗು ಉಳಿಸಿಕೊಳ್ಳಲಾಗದ ನೋವಿನಲ್ಲೇ ಶಿವಮೊಗ್ಗದಿಂದ ಸಾಗರಕ್ಕೆ ತೆರಳಿದ ದಂಪತಿ ಅಂತ್ಯಸಂಸ್ಕಾರ ನೆರವೇರಿಸಿದ ಸ್ವಲ್ಪ ಸಮಯದಲ್ಲೇ ತಮ್ಮ ಮಗು ಬದುಕಿದೆ ಎಂದು ತಿಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಇತ್ತ ಬದುಕಿರುವ ಮಗು ತಮ್ಮದಲ್ಲ ಎಂದು ತಿಳಿದಾಗ ಮತ್ತೊಬ್ಬ ದಂಪತಿಗೆ ಅಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತ ಅನುಭವವಾಗಿದೆ.

ಹೊನ್ನಾಳಿ ತಾಲ್ಲೂಕು ಸಾಸ್ವೇಹಳ್ಳಿ ಸಮೀಪದ ಹನಗವಾಡಿ ದಂಪತಿ ಸುಮಾ ಅಂಜನಪ್ಪ ಅವರು ನ.2ರಂದು ಮೆಗ್ಗಾನ್‌ಗೆ ದಾಖಲಾಗಿದ್ದಾರೆ. ಅಂದೇ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 1.5 ಕೆ.ಜಿ ಇದ್ದ ಕಾರಣ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಅದೇ ಸಮಯಕ್ಕೆ ಸಾಗರದ ಸುಮಾ ಗೋಪಾಲಪ್ಪ ಅವರ ಹೆಣ್ಣು ಮಗುವನ್ನು ಅದೇ ಘಟಕಕ್ಕೆ ಸೇರಿಸಲಾಗಿದೆ.

ADVERTISEMENT

ಇತ್ತ ಸುಮಾ ಅಂಜನಪ್ಪ ಅವರ ಮಗು ಗುರುವಾರ ಮಧ್ಯರಾತ್ರಿ ಮೃತಪಟ್ಟಿದೆ. ಅಲ್ಲಿನ ಸಿಬ್ಬಂದಿ ತಾಯಿಯ ಹೆಸರು ಕೂಗಿದಾಗ ಅಲ್ಲೇ ಇದ್ದ ಸಾಗರದ ಸುಮಾ ಅವರ ಕುಟುಂಬದವರು ತಮ್ಮ ಮಗು ಎಂದು ಭಾವಿಸಿ ಪಡೆದುಕೊಂಡಿ ದ್ದಾರೆ. ಬೆಳಗಿನ ಜಾವವೇ ಊರಿಗೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಿ ದ್ದಾರೆ. ಮಧ್ಯಾಹ್ನದ ವೇಳೆಗೆ ಸತ್ಯ ಬೆಳಕಿಗೆ ಬಂದಿದೆ.

ಠಾಣೆ ಮೆಟ್ಟಿಲೇರಿದ ಸುಮಾ ಅಂಜನಪ್ಪ ದಂಪತಿ: ಮೃತ ಮಗುವನ್ನು ತಮಗೆ ನೀಡದೇ ಬೇರೆಯವರಿಗೆ ನೀಡಿದ ಆಸ್ಪತ್ರೆ ವಿರುದ್ಧ ಸುಮಾ ಅಂಜನಪ್ಪ ದಂಪತಿ ದೊಡ್ಡಪೇಟೆ ಠಾಣೆ ಮೆಟ್ಟಿಲೇರಿದ್ದಾರೆ.

‘ದೂರು ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸತ್ಯಾಸತ್ಯತೆ ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಶ್ರೀಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.