ADVERTISEMENT

ಹಿಂದುಳಿದ ವರ್ಗದವರ ಸಮಾವೇಶ ಅ.30ಕ್ಕೆ

ಬಿಜೆಪಿಯಿಂದ ಆಯೋಜನೆ; ಐದು ತಂಡಗಳಲ್ಲಿ ಜಿಲ್ಲೆಗಳಿಗೆ ಪ್ರವಾಸ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 6:00 IST
Last Updated 24 ಸೆಪ್ಟೆಂಬರ್ 2022, 6:00 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಶಿವಮೊಗ್ಗ: ಬಿಜೆಪಿಯಿಂದ ಅಕ್ಟೋಬರ್‌ 30ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಅ. 9ರಂದು ಹುಬ್ಬಳ್ಳಿಯಲ್ಲಿ ಸಭೆ ನಡೆಯಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

‘ಪೂರ್ವಭಾವಿ ಸಭೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದಲೂ 3 ಸಾವಿರಕ್ಕೂ ಹೆಚ್ಚು ಹಿಂದುಳಿದ ವರ್ಗದ ಪ್ರಮುಖರು ಭಾಗವಹಿಸಲಿದ್ದಾರೆ. ಕಲಬುರಗಿ ಸಮಾವೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ’ ಎಂದುಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಮಾವೇಶದ ಹಿನ್ನೆಲೆಯಲ್ಲಿ ಐದು ತಂಡಗಳಾಗಿ ಪಕ್ಷದ ಮುಖಂಡರು ಪ್ರವಾಸ ಹಮ್ಮಿಕೊಂಡಿದ್ದೇವೆ. ಸೆ.27ರಂದು ನನ್ನ ನೇತೃತ್ವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, 30ರಂದು ಚಾಮರಾಜನಗರ, ಅಕ್ಟೋಬರ್‌ 1ರಂದು ಮಂಡ್ಯ, ಹಾಸನ, 3ರಂದು ಬೀದರ್ ಪ್ರವಾಸ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸಚಿವ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಇನ್ನೊಂದು ತಂಡ ಸೆ.27ರಂದು ದಕ್ಷಿಣ ಕನ್ನಡ, ಉಡುಪಿ, ಅ. 3ರಂದು ರಾಯಚೂರು, ಯಾದಗಿರಿಯಲ್ಲಿ ಪ್ರವಾಸ ಕೈಗೊಳ್ಳಲಿದೆ.

ಮೂರನೇ ತಂಡ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸೆ. 28ರಂದು ಕೋಲಾರ, ಚಿಕ್ಕಬಳ್ಳಾಪುರ, 29ರಂದು ಬೆಂಗಳೂರು ಗ್ರಾಮಾಂತರ, ಉತ್ತರ, ದಕ್ಷಿಣ ಹಾಗೂ ರಾಮನಗರ ಪ್ರವಾಸ ಕೈಗೊಳ್ಳಲಿದೆ.

ಸಚಿವ ಬೈರತಿ ಬಸವರಾಜ ನೇತೃತ್ವದಲ್ಲಿ ನಾಲ್ಕನೇ ತಂಡ ಅಕ್ಟೋಬರ್‌ 1ರಂದು ಚಿತ್ರದುರ್ಗ, ದಾವಣಗೆರೆ, 2ರಂದು ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, 3ರಂದು ತುಮಕೂರು, ಮಧುಗಿರಿಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಐದನೇ ತಂಡ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಅ. 1ರಂದು ವಿಜಯನಗರ, ಬಳ್ಳಾರಿ, 3ರಂದು ಬೆಳಗಾವಿ, ಚಿಕ್ಕೋಡಿಯಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಶಿವರಾಜ್, ನಾಗರಾಜ್, ಮಧುಸೂದನ್, ಸಂತೋಷ್ ಬಳ್ಳೆಕೆರೆ, ದಿನೇಶ್, ಅಣ್ಣಪ್ಪ, ಬಾಲು ಇದ್ದರು.

***

ವಿಭಜನತೆಯತ್ತ ಕಾಂಗ್ರೆಸ್: ಲೇವಡಿ

‘ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಏನೂ ಮಾಡಿಲ್ಲ. ಖಾಲಿ ಡಬ್ಬ ಅಲುಗಾಡಿಸಿ ಶಬ್ದ ಜಾಸ್ತಿ ಮಾಡಿದ್ದು ಬಿಟ್ಟರೆ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗದವರ ಸಮಾವೇಶ ಮಾಡದೇ ಸಿದ್ಧರಾಮೋತ್ಸವ ಮಾಡಿದ್ದಾರೆ’ ಎಂದು ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು.

‘ಡಿ.ಕೆ.ಶಿವಕುಮಾರ್ ಸರ್ವಾಧಿಕಾರಿ ಧೋರಣೆ ಬಗ್ಗೆಈಗಾಗಲೇ ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ವಿಭಜನೆಯತ್ತ ಸಾಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಕಾಂತರಾಜ್ ವರದಿ ₹140 ಕೋಟಿ ವೆಚ್ಚದಲ್ಲಿ ತಯಾರಿಸಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಆ ವರದಿಗೆ ಮುಖ್ಯ ಕಾರ್ಯದರ್ಶಿ ಸಹಿಯನ್ನೇ ಹಾಕಿಲ್ಲ. ಮೂಗಿಗೆ ತುಪ್ಪ ಸವರಿ ಮೋಸ ಮಾಡಿದ್ದರು. ಹೀಗಾಗಿ ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.