ADVERTISEMENT

ಬಗರ್‌ಹುಕುಂ ಅಕ್ರಮ; 15 ದಿನಗಳ ಒಳಗೆ ಕ್ರಮ

ಜಿಲ್ಲೆಯ ಮಳೆ, ಬೆಳೆ ಹಾನಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ದೇಶಪಾಂಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 14:59 IST
Last Updated 27 ಜೂನ್ 2018, 14:59 IST
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಮಳೆ, ಬೆಳೆ ಪರಿಸ್ಥಿತಿ, ಪುನರ್ವಸತಿ, ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿದರು.
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಮಳೆ, ಬೆಳೆ ಪರಿಸ್ಥಿತಿ, ಪುನರ್ವಸತಿ, ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿದರು.   

ಶಿವಮೊಗ್ಗ: ಬಗರ್‌ಹುಕುಂಮಂಜೂರಾತಿಯಲ್ಲಿಅಕ್ರಮ ನಡೆದಿದೆ ಎನ್ನುವ ಆರೋಪ ಕುರಿತುತನಿಖೆ ನಡೆಸಿ, 15 ದಿನಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ವಿ. ದೇಶಾಪಾಂಡೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮಳೆ, ಬೆಳೆ ಪರಿಸ್ಥಿತಿ, ಪುನರ್ವಸತಿ, ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಮುಕ್ತಾಯದ ಹಂತದಲ್ಲಿ ಬಗರ್‌ಹುಕುಂ ಮಂಜೂರಾತಿಯಲ್ಲಿನಡೆದ ಅಕ್ರಮಗಳ ಕುರಿತು ವಿಷಯ ಪ್ರಸ್ತಾಪಿಸಿದ ಸೊರಬಶಾಸಕ ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಅಕ್ರಮದಲ್ಲಿ ಭಾಗಿಯಾದ ತಹಶೀಲ್ದಾರ್‌ಗಳು, ಸೂಕ್ತ ಮೇಲುಸ್ತುವಾರಿ ನಡೆಸದ ಉಪ ವಿಭಾಗಾಧಿಕಾರಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮ ಮಂಜೂರಾತಿ ರದ್ದುಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಕೋಣಂದೂರಿನ ಸರ್ಕಾರಿ ಭೂಮಿಯಲ್ಲಿ ಕ್ರೈಸ್ತ ಸಮುದಾಯದವರು 30–40 ವರ್ಷಗಳ ಹಿಂದೆ ಶಾಲೆ ಕಟ್ಟಿದ್ದಾರೆ. ಬಗರ್‌ಹುಕುಂ ಸಮಿತಿ ಅದೇ ಭೂಮಿಯಲ್ಲಿ ತೋಟ ಇದೆ ಎಂದು ಮಂಜೂರಾತಿ ನೀಡಿದೆ.ಉಪ ವಿಭಾಗಾಧಿಕಾರಿ ಸಹ ಸ್ಥಳ ಪರಿಶೀಲನೆ ನಡೆಸದೇ ಒಪ್ಪಿಗೆ ಸೂಚಿಸಿದ್ದಾರೆ. ಗಂಡನ ಹೆಸರಿಗೆ ಜಮೀನು ಇದ್ದರೂ, ಪತ್ನಿ ಹೆಸರಿಗೆ ನೀಡಲಾಗಿದೆ. ಇಂತಹ ಅಧಿಕಾರಿಗಳಿಗೆ ನೀಡಿರುವ ದಂಡಾಧಿಕಾರಿಗಳ ಅಧಿಕಾರ ರದ್ದು ಮಾಡಬೇಕು’ ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಸೊರಬ ತಾಲ್ಲೂಕಿನ ಬಗರ್‌ಹುಕುಂ ಮಂಜೂರಾತಿಯಲ್ಲಿ ಅಕ್ರಮಗಳ ಸರಮಾಲೆಯೇ ನಡೆದಿದೆ. ಸ್ಮಾಶನ ಭೂಮಿ, ಸಂತೆ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಬಹುತೇಕ ಪ್ರದೇಶವನ್ನುಬಗರ್‌ಹುಕುಂ ಸಾಗುವಳಿ ಹೆಸರಲ್ಲಿ ಮಂಜೂರು ಮಾಡಲಾಗಿದೆ. ಪಟ್ಟಣ ವ್ಯಾಪ್ತಿಯಿಂದ5 ಕಿ.ಮೀ. ಒಳಗೆ ಮಂಜೂರಾತಿ ನೀಡಲು ಅಧಿಕಾರ ಇಲ್ಲಿದ್ದರೂ ನಿಯಮ ಉಲ್ಲಂಘಿಸಲಾಗಿದೆ. ನಿಜವಾದ ರೈತರ 23 ಸಾವಿರ ಅರ್ಜಿಗಳನ್ನು ಸಕಾರಣ ಇಲ್ಲದೇ ವಜಾ ಮಾಡಲಾಗಿದೆ. ಕೃಷಿಕರಲ್ಲದವರಿಗೆಭೂಮಿ ನೀಡಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ದಾಖಲೆ ಪ್ರದರ್ಶಿಸಿದರು.

ವಾರದ ಒಳಗೆ ಹಾನಿಯ ವರದಿ ಸಲ್ಲಿಕೆ:

ಮಳೆಯಿಂದ ಹಾನಿಗೀಡಾದ ಬೆಳೆಗಳು, ಆಸ್ತಿಗಳಿಗೆತಕ್ಷಣ ಪ್ರಕಾರ ಪರಿಹಾರ ಒದಗಿಸಬೇಕು ಎಂದು ದೇಶಪಾಂಡೆ ಅಧಿಕಾರಿಗಳಿಗೆತಾಕೀತು ಮಾಡಿದರು. ಮಳೆ ಹಾನಿ ಪ್ರಕರಣಗಳಲ್ಲಿ ಪರಿಹಾರ ಒದಗಿಸಲು ಅನುದಾನದ ಕೊರತೆಯಿಲ್ಲ. ಜಿಲ್ಲಾಧಿಕಾರಿ ಅವರ ಬಳಿ ₨ 2.5 ಕೋಟಿ ಅನುದಾನ ಲಭ್ಯವಿದೆ. ಇನ್ನೂ 2.5 ಲಕ್ಷ ನೀಡಲಾಗುವುದು. ಪ್ರತಿ ತಹಶೀಲ್ದಾರ್ ಬಳಿ ಕನಿಷ್ಠ ₨ 20ಲಕ್ಷ ಅನುದಾನ ಲಭ್ಯವಿರಬೇಕು. ಮಳೆಯಿಂದ ಆಗಿರುವ ಬೆಳೆ ಹಾನಿ, ರಸ್ತೆ ಸೇತುವೆಗಳಿಗೆ ಸಂಭವಿಸಿರುವ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಒಂದು ವಾರದ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಬೆಳೆ ಹಾನಿ ಕುರಿತು ಎಲ್ಲಾ ತಾಲೂಕುಗಳಲ್ಲೂ ಕೃಷಿ ಅಥವಾ ತೋಟಗಾರಿಕಾ ಇಲಾಖೆ ಅಧಿಕಾರಿಗಳು,ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಅಡಿಕೆ ಮರಗಳಿಗೆ ಉಂಟಾದ ಹಾನಿಯ ಕುರಿತು ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು. ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ಕೊಂಬೆ ಕತ್ತರಿಸಿ ತೆರವುಗೊಳಿಸಬೇಕು. ಮಳೆ ಗಾಳಿಯಿಂದ ಹಾನಿಗೀಡಾಗುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ತಕ್ಷಣ ದುರಸ್ತಿ ಕೈಗೊಳ್ಳಬೇಕು. ಶಾಲೆ, ಅಂಗನವಾಡಿ ಆಸ್ಪತ್ರೆ ಕಟ್ಟಡಗಳಿಗೆ ಆಗಿರುವಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಬೇಕು ಎಂದರು.

ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕು. ದುರ್ಘಟನೆ ನಡೆದ ಸ್ಥಳಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿಯಿಂದ ಉಂಟಾಗಬಹುದಾದ ತೊಂದರೆ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಬೇಕು.ಕರ್ತವ್ಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಮಳೆ, ಬೆಳೆ ವಿವರ: ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸರಾಸರಿ 459ಮಿಮಿ ಮಳೆಯಾಗಿದೆ.ವಾಡಿಕೆಗಿಂತ ಶೇ 36ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ನಾಟಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಭತ್ತ 1,02,503 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 6,365 ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಸುಕಿನ ಜೋಳ 43,735 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಮಾಹಿತಿ ನೀಡಿದರು.ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಬೆಳೆಹಾನಿ: ಅತಿವೃಷ್ಟಿಯಿಂದಾಗಿ ಹೊಸನಗರ ತಾಲೂಕಿನಲ್ಲಿ ಒಟ್ಟು 519 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಭೂಮಿಗೆ ಹಾನಿಯಾಗಿದೆ.ಒಟ್ಟು ₨ 63.37 ಲಕ್ಷ ಹಾನಿಯಾಗಿರುವ ಅಂದಾಜಿದೆ.ಒಟ್ಟು 636 ಕೃಷಿಕರಿಗೆ ಇದರಿಂದ ಹಾನಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಅತಿವೃಷ್ಟಿ, ಆಲಿಕಲ್ಲು ಮಳೆಯಿಂದಾಗಿ 23.63 ಹೆಕ್ಟೇರ್ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಸುಮಾರು ₨ 3.26 ಲಕ್ಷ ಹಾನಿಯಾಗಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನ ಕುಮಾರ್, ಎಸ್‌. ರುದ್ರೇಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್,ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಎಂ. ಲೋಕೇಶ್, ಜಿಲ್ಲಾ ಪಂಚಾಯ್ತಿ ಸಿಇಒಕೆ. ರಾಕೇಶ್ ಕುಮಾರ್,ಹೆಚ್ಚುವರಿಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಉಪಸ್ಥಿತರಿದ್ದರು.

ಶೇ 50ರಷ್ಟು ಮನೆ ಹಾನಿಗೆ ₨ 75 ಸಾವಿರ

ಮಳೆಯಿಂದ ಮನೆಗಳಿಗೆ ಹಾನಿಯಾದರೆ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದರು. ಯಾವುದೇ ಮನೆಗಳಿಗೆ ಶೇ 15ರಷ್ಟು ಹಾನಿಯಾಗಿದ್ದರೆ₨ 5,200, ಶೇ 50ರಷ್ಟು ಹಾನಿಯಾಗಿದ್ದರೆ ₨ 75 ಸಾವಿರದವರೆಗೂ ಪರಿಹಾರ ವಿತರಿಸಲು ಸೂಚಿಸಿದರು.

ಪಿಡ್ಬ್ಯೂಡಿ ರಸ್ತೆಬಳಸಲು ಬಿಡಬೇಡಿ!

ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬ ಹಾಕಲು ಅವಕಾಶ ನೀಡುತ್ತಿಲ್ಲ. ವಿದ್ಯುತ್ ಮಾರ್ಗಗಳ ಮೇಲೆ ಮರದ ಅರೆ ಬಂದರೂ ಕಡಿಯಲು ಬಿಡುವುದಿಲ್ಲ. ಅವರ ಗಮನಕ್ಕೆ ತಾರದೇ ಕಡಿದರೆ ಪ್ರಕರಣ ದಾಖಲಿಸುತ್ತಾರೆ. ಕಾಡಿನ ರಸ್ತೆಗಳಲ್ಲಿ ಸಂಚರಿಸಲೂ ಅಡ್ಡಿ ಮಾಡುತ್ತಾರೆ. ಹಾಗಾದರೆ, ಅವರು ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯ್ತಿ ರಸ್ತೆಗಳಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

ನಕ್ಸಲ್‌ ಪ್ರದೇಶದಲ್ಲೂ ವಿದ್ಯುತ್ ಮಾರ್ಗಕ್ಕೆ ಅಡ್ಡಿ ಮಾಡುತ್ತಾರೆ. ಹಿಂದೆ ನಕ್ಸಲರು ಕೋವಿ ಹಿಡಿದಾಗ ಇವರು ಕಾಡಿಗೇ ಕಾಲಿಟ್ಟಿರಲಿಲ್ಲ. ಇಂಥವರಿಂದಲೇ ಸಮಸ್ಯೆಗಳು ಸೃಷ್ಟಿಯಾಗುವುದು ಎಂದು ಹರಿಹಾಯ್ದರು.

ಪರಿಹಾರಕ್ಕೆ ಹೆಚ್ಚು ಜನ ಸಾಯಬೇಕೇ?

ಬೆಳೆ ಹಾನಿ ಪರಿಹಾರ ವಿತರಣೆ ನಿಯಮಗಳು ಹೇಗಿವೆ ಎಂದರೆ ಒಂದು ಅಪಘಾತದಲ್ಲಿ 20 ಜನ ಮೃತಪಟ್ಟಿದ್ದರೂಪರಿಹಾರ ಅಸಾಧ್ಯ. ಕನಿಷ್ಠ 33 ಜನರಾದರೂ ಸಾಯಬೇಕು ಎನ್ನುವಂತಿದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಕುಟುಕಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ ಈ ನಿಯಮ ರೂಪಿಸಿದ್ದು ಕೇಂದ್ರ ಸರ್ಕಾರ ಎನ್ನುತ್ತಿದ್ದಂತೆ ವರಸೆ ಬದಲಿಸಿದ ಹಾಲಪ್ಪ, ತಾವು ಹಿರಿಯ ಅನುಭವಿಗಳು ಇಲ್ಲಿಂದಲೇ ಈ ಸಮಸ್ಯೆ ಪರಿಹಾರಕ್ಕೆ ನಾಂದಿ ಹಾಡಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.