ADVERTISEMENT

ಶಿವಮೊಗ್ಗ: ಐದನೇ ಬಾರಿ ಚುನಾವಣೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 18:52 IST
Last Updated 2 ಜನವರಿ 2019, 18:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ:ಹನಸವಾಡಿ ಗ್ರಾಮ ಪಂಚಾಯಿತಿಯ ಮೂರು ಸ್ಥಾನಗಳಿಗೆ ಬುಧವಾರ ನಿಗದಿಯಾಗಿದ್ದ ಚುನಾವಣೆಯನ್ನು ಅಲ್ಲಿನ ಗ್ರಾಮಸ್ಥರು ಸತತ ಐದನೇ ಬಾರಿಗೆ ಬಹಿಷ್ಕರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು.

12 ಸದಸ್ಯ ಬಲದ ಪಂಚಾಯಿತಿಗೆ ಮೂರು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ 9 ಸದಸ್ಯರು ಆಯ್ಕೆಯಾಗಿದ್ದರು. 3 ಸ್ಥಾನಗಳ ಚುನಾವಣೆ ಬಹಿಷ್ಕರಿಸಲಾಗಿತ್ತು. ನಂತರ ಪ್ರತಿ 6 ತಿಂಗಳಿಗೆ ಉಪ ಚುನಾವಣೆ ನಿಗದಿ ಮಾಡುತ್ತಾ ಬರಲಾಗಿತ್ತು. ಇದುವರೆಗೂ 4 ಬಾರಿ ಚುನಾವಣೆ ಬಹಿಷ್ಕರಿಸಿದ್ದ ಮತದಾರರು ಬುಧವಾರ 5ನೇ ಬಾರಿ ಬಹಿಷ್ಕರಿಸಿದ್ದಾರೆ.

ಬಹಿಷ್ಕಾರಕ್ಕೆ ಕಾರಣ: ಮೇಲಿನಹನಸವಾಡಿಯಲ್ಲಿ 624 ಮತಗಳಿವೆ. ಎಲ್ಲರೂ ಲಿಂಗಾಯತ ಜಾತಿಗೆ ಸೇರಿದವರು. ಹಾಗಾಗಿ, ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಬೇಕು ಎನ್ನುವುದು ಅವರ ಆಗ್ರಹ. ಖಾಲಿ ಇರುವ ಮೂರು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ, ಬಿಸಿಎಂ (ಎ) ಮಹಿಳೆ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಬಿಸಿಎಂ ಹಾಗೂ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರೂ ಅವರು ಪಕ್ಕದ ಕ್ಷೇತ್ರದವರಾದ ಕಾರಣ ಅವರಿಗೆ ಮತದಾನದ ಹಕ್ಕು ಇರಲಿಲ್ಲ. ಚುನಾವಣಾಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಮತಗಟ್ಟೆಯಲ್ಲಿ ಕಾದರೂ ಯಾರೊಬ್ಬರೂ ಮತದಾನ ಮಾಡಲಿಲ್ಲ.

ADVERTISEMENT

‘ಐದನೇ ಬಾರಿ ಚುನಾವಣೆ ಬಹಿಷ್ಕಾರ ನಡೆದಿದೆ. ಸರ್ಕಾರಕ್ಕೆ ಈ ಕುರಿತು ವರದಿ ನೀಡಲಾಗುವುದು. ಸೂಚನೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ, ತಹಶೀಲ್ದಾರ್ ಸತ್ಯನಾರಾಯಣ ಮಾಹಿತಿ ನೀಡಿದರು.

ಭದ್ರಾವತಿ ತಾಲ್ಲೂಕಿನ ಮೈದೊಳಲು ಪಂಚಾಯಿತಿ ಹಾಗೂ ಹೊಸನಗರ ತಾಲ್ಲೂಕು ಕರಿಮನೆ ಪಂಚಾಯಿತಿಗಳ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.