ADVERTISEMENT

ಶಿರಾಳಕೊಪ್ಪ | ಕೈಬೀಸಿ ಕರೆಯುತ್ತಿದೆ ‘ಬಂದಳಿಕೆ’ ನಿಸರ್ಗದ ಒಡಲು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 6:40 IST
Last Updated 4 ಆಗಸ್ಟ್ 2024, 6:40 IST
ಶಿರಾಳಕೊಪ್ಪ ಹತ್ತಿರದ ಬಂದಳಿಕೆ ಗ್ರಾಮದಲ್ಲಿರುವ ಪ್ರಾಚೀನ ಮಹಾನವಮಿ ದಿಬ್ಬ
ಶಿರಾಳಕೊಪ್ಪ ಹತ್ತಿರದ ಬಂದಳಿಕೆ ಗ್ರಾಮದಲ್ಲಿರುವ ಪ್ರಾಚೀನ ಮಹಾನವಮಿ ದಿಬ್ಬ   

ಶಿರಾಳಕೊಪ್ಪ: ಪ್ರಕೃತಿದತ್ತವಾಗಿರುವ ಹಸಿರು ಹುಲ್ಲಿನ ಸೊಬಗು. ಮನಸ್ಸಿಗೆ ಹಿತ ನೀಡುವ ತಣ್ಣನೆಯ ವಾತಾವರಣ, ನಿಶಬ್ಧವಾಗಿರುವ ದೇವಾಲಯದ ಸಮುಚ್ಚಯ. ನಿಬ್ಬೆರಗಾಗಿಸುವ ಚರಿತ್ರೆ ಹೊಂದಿರುವ ಮಲೆನಾಡಿನ ಕಟ್ಟಕಡೆಯ ಬೇಚಾರಖ್ ಗ್ರಾಮವೇ ‘ಬಂದಳಿಕೆ’. ಇದು ತನ್ನ ಸೊಬಗಿನ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬಂದಳಿಕೆಯು ಜಿಲ್ಲೆಯ ಕಟ್ಟಕಡೆಯ ಗ್ರಾಮವಾಗಿದ್ದು, ಬಯಲುಸೀಮೆಯ ಹೆಬ್ಬಾಗಿಲೆಂದೇ ಖ್ಯಾತಿ ಹೊಂದಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 86 ಕಿ.ಮೀ ಹಾಗೂ ಹಾವೇರಿ ಜಿಲ್ಲಾ ಕೇಂದ್ರದಿಂದ 48 ಕಿ.ಮೀ. ದೂರದಲ್ಲಿ ಈ ಗ್ರಾಮ ಇದೆ. 

ಹಸಿರು ಹುಲ್ಲುಹಾಸಿನ ನಡುವೆ ತಲೆ ಎತ್ತಿ ನಿಂತಿರುವ ಈ ಗ್ರಾಮವು ಛಾಯಾಗ್ರಾಹಕರು ಮತ್ತು ಪ್ರಶಾಂತತೆ ಬಯಸುವವರ ಪಾಲಿನ ನೆಚ್ಚಿನ ತಾಣವಾಗಿದೆ. ಕುಟುಂಬದೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡುವವರಿಗೆ ಹೊಸ ಅನುಭವವೇ ದೊರೆಯುತ್ತದೆ. ಮಲೆನಾಡಿನ ಸೊಬಗನ್ನು ಅನುಭವಿಸುವವರು ಮತ್ತು ಇತಿಹಾಸದ ಪುಟಗಳನ್ನು ತಿರುವಿ ಹಾಕುವ ಬಯಕೆ ಉಳ್ಳವರ ಪಾಲಿಗೂ ಈ ತಾಣ ಪ್ರಿಯವಾದುದು. 

ADVERTISEMENT

ಇದು ಸಾವಿರಾರು ವರ್ಷಗಳ ಕಾಲ ರಾಜಧಾನಿಯಾಗಿ ಮೆರೆದ ಗ್ರಾಮ. ಈಗ ಇಲ್ಲಿ ಒಬ್ಬರೂ ವಾಸವಿಲ್ಲದಿರುವುದು ವೈಚಿತ್ರ್ಯ. 25 ಎಕರೆ ಪ್ರದೇಶದಲ್ಲಿರುವ ದೇವಾಲಯ ಇಲ್ಲಿನ ಗತವೈಭವವನ್ನು ಸಾರಿ ಹೇಳುತ್ತಿದೆ.

ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಬಂದಳಿಕೆ ಗ್ರಾಮವು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈಗ ಇದು ಮಲೆನಾಡಿನ ಹಾಳು ಹಂಪೆ ಎಂದೇ ಗುರುತಿಸಿಕೊಂಡಿದೆ.

ಇಲ್ಲಿನ ತ್ರಿಮೂರ್ತಿ ನಾರಾಯಣ ದೇವಾಲಯವನ್ನು ಕ್ರಿ.ಶ. 1160ರಲ್ಲಿ ಕಲ್ಯಾಣಿ ಚಾಲುಕ್ಯರು ನಿರ್ಮಾಣ ಮಾಡಿದ್ದಾರೆ. ದೇವಾಲಯ ಸಮುಚ್ಚಯ ಪ್ರವೇಶಿಸುತ್ತಿದಂತೆ ತ್ರಿಮೂರ್ತಿ ನಾರಾಯಣ ದೇವಾಲಯದ ಆಕರ್ಷಕ ವಿನ್ಯಾಸ ಕಾಣಸಿಗುತ್ತದೆ. ಇದು ತ್ರಿಕುಟಾಚಲ ಶೈಲಿಯ ದೇವಸ್ಥಾನವಾಗಿದ್ದು, 3 ಶಿಖರ ಹಾಗೂ 3 ಶುಕನಾಸಿ ಇದೆ. ಪಶ್ಚಿಮ ಶುಕನಾಸಿಯಲ್ಲಿನ ಸಿಂಹ ಲಲಾಟ, ಲಲಾಟದ ಸುತ್ತಲೂ ಸೂಕ್ಷ್ಮವಾಗಿ ಕೆತ್ತಲಾಗಿರುವ ಶಿಲ್ಪದ ಲತೆಗಳು ಕಣ್ಮನ ತಣಿಸುತ್ತವೆ.

ಮಹಾನವಮಿ ದಿಬ್ಬ ಹಾಗೂ ಕೆಲವು ದೇವಾಲಯಗಳು ಕುಸಿದು ಬಿದ್ದಿದ್ದು, ನಿಂತಿರುವ ಕಲ್ಲು ಕಂಬಗಳು ಅಸ್ತಿಪಂಜರದಂತೆ ಭಾಸವಾಗುತ್ತಿವೆ. ಹಲವಾರು ಗೋಶಾಸನಗಳು, ವೀರಗಲ್ಲುಗಳು, ಸಿಡಿತಲೆಗಳು, ಒಕ್ಕೈ ಹಾಗೂ ಇಕ್ಕೈ ಮಾಸ್ತಿಕಲ್ಲುಗಳು, ದಾನ ಶಾಸನಗಳು, ಜಿನ ಶಾಸನಗಳನ್ನು ಇಲ್ಲಿ ಕಾಣಬಹುದು.

ಆನೇಕಲ್‌ ಸೋಮೇಶ್ವರ ದೇವಾಲಯ: ಇಲ್ಲಿರುವ ಆನೇಕಲ್‌ ಸೋಮೇಶ್ವರ ದೇವಾಲಯವು ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಈ ದೇವಸ್ಥಾನದ ಜಾಲಾಂದ್ರಗಳಲ್ಲಿ ರಾಮಾಯಾಣ ಹಾಗೂ ಮಹಾಭಾರತ ಅಧ್ಯಾಯಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಈ ದೇವಸ್ಥಾನವನ್ನು ತಳವಾರ ಮಾಚೆನಾಯಕ ಕ್ರಿ.ಶ 1163ರಲ್ಲಿ ನಿರ್ಮಿಸಿದ್ದಾನೆ. ಶಾಂತಿನಾಥ ಬಸದಿ ಹಾಗೂ ಸಲ್ಲೇಖನ ವ್ರತ ಕೈಗೊಂಡ ಶಾಸನಗಳು ಸೇರಿ ಜೈನ ಪರಂಪರೆಯ ಕುರುಹುಗಳೂ ಕಾಣಸಿಗುತ್ತವೆ. ಪ್ರಾಚೀನ ಕಾಲದ ಬನಶಂಕರಿ ದೇವಿ ಸ್ಥಳೀಯರ ಆರಾಧ್ಯ ದೈವವಾಗಿದೆ.

ಇದು 70ರ ದಶಕದಲ್ಲಿ ನಾಗರಖಂಡ ರಾಜಧಾನಿಯಾಗಿದ್ದ ಪ್ರದೇಶ. ಇಲ್ಲಿ ನಂದರು, ಮೌರ್ಯರು ಆಡಳಿತ ನಡೆಸಿದ್ದ ಬಗ್ಗೆ ದಾಖಲೆಗಳು ಲಭಿಸುತ್ತವೆ. ಕದಂಬರು, ಸೇಂದ್ರಕರು, ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ಆಳ್ವಿಕೆ ಮಾಡಿದ್ದಾರೆ. ಇದು ಜೈನ, ವೈದಿಕ ಹಾಗೂ ಕಾಳಮುಖ ಪಂಥದ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. 

ನೇರ ಬಸ್‌ ಸಂಪರ್ಕವಿಲ್ಲ

ಒಂದು ಕಿ.ಮೀ. ನಡೆದುಕೊಂಡು ಸಾಗಿ ನಿರ್ಜನ ಪ್ರದೇಶದಂತಿರುವ ಬಂದಳಿಕೆ ಗ್ರಾಮಕ್ಕೆ ನೇರ ಬಸ್‌ ಸಂಪರ್ಕವಿಲ್ಲ. ಶಿರಾಳಕೊಪ್ಪದಿಂದ ನರಸಾಪುರದವರೆಗೂ ಬಸ್‌ನಲ್ಲಿ ಹೋಗಬಹುದು. ನಂತರ 1 ಕಿ.ಮೀ. ನಡೆದು ಸಾಗಬೇಕು. ಹಾವೇರಿ ಭಾಗದಿಂದ ಬರುವ ಪ್ರವಾಸಿಗರು ಚಿಕ್ಕೆರೂರು ಮೂಲಕ ಹಾಗೂ ಆನವಟ್ಟಿ ಭಾಗದಿಂದ ಬರುವ ಪ್ರವಾಸಿಗರು ಕೊಳಗಿ ಶಂಕ್ರಿಕೊಪ್ಪ ಮೂಲಕ ತಲುಪಬಹುದು. ಬಂದಳಿಕೆಯು ಶಿಕಾರಿಪುರ ತಾಲ್ಲೂಕು ಕೇಂದ್ರದಿಂದ ಶಿರಾಳಕೊಪ್ಪ ಮೂಲಕ 16 ಕಿ.ಮೀ. ಸಾಗಿದರೆ ನರಸಾಪುರ ಗ್ರಾಮದ ಮಡಿಲಲ್ಲಿ ಸಿಗುತ್ತದೆ.

ಶಿರಾಳಕೊಪ್ಪ ಹತ್ತಿರದ ಬಂದಳಿಕೆ ಗ್ರಾಮದ ಪ್ರಾಚೀನ ತ್ರಿಮೂರ್ತಿ ನಾರಾಯಣ ದೇವಾಲಯ
ಶಿರಾಳಕೊಪ್ಪ ಹತ್ತಿರದ ಬಂದಳಿಕೆ ಗ್ರಾಮದ 25 ಎಕರೆ ಪ್ರದೇಶದಲ್ಲಿರುವ ದೇವಸ್ಥಾನದ ಸಮುಚ್ಚಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.