
ತ್ಯಾಗರ್ತಿ: ತ್ಯಾಗರ್ತಿಯಲ್ಲಿ ಸೋಮವಾರ ಬಸವಣ್ಣನ ಪರ್ವ ಅದ್ದೂರಿಯಾಗಿ ನಡೆಯಿತು.
ಕಾಳೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ವಿಗ್ರಹ ಹಾಗೂ ಎತ್ತುಗಳನ್ನು ಅಲಂಕರಿಸಿ ಭಜನಾ ತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.
ತ್ಯಾಗರ್ತಿಯಲ್ಲಿ ಮಳೆ ಬಸವಣ್ಣ ಹಾಗೂ ಬಿಸಿಲು ಬಸವಣ್ಣ ಎಂಬ ಎರಡು ವಿಗ್ರಹಗಳಿವೆ. ಮಳೆ ಅಭಾವ ಕಂಡುಬಂದರೆ ಸ್ಥಳೀಯರು ಮಳೆ ಬಸವಣ್ಣನನ್ನು ಪೂಜಿಸಿ, ವಿಗ್ರಹವನ್ನು ಪುಷ್ಕರಣಿಯಲ್ಲಿ ಮುಳುಗಿಸುತ್ತಾರೆ. ಇದರಿಂದ 15 ದಿನದೊಳಗಾಗಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಮಳೆ ಬಂದ ನಂತರ ನೀರಿನಿಂದ ಬಸವಣ್ಣನ ವಿಗ್ರಹವನ್ನು ತೆಗೆದು ಗ್ರಾಮದಲ್ಲಿ ಮೆರವಣಿಗೆ ನೆಡೆಸಿ ಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸುತ್ತಾರೆ.
ಅಕಾಲದಲ್ಲಿ ಮಳೆ ಆರ್ಭಟ ಹೆಚ್ಚಾದರೆ ಬಿಸಿಲು ಬಸವಣ್ಣನ ವಿಗ್ರಹವನ್ನು ಪೂಜಿಸಿ ರಾಮತೀರ್ಥ ಪುಷ್ಕರಣಿಯಲ್ಲಿ ಮುಳುಗಿಸುತ್ತಾರೆ. ಇದರಿಂದ ಮಳೆ ಕಡಿಮೆಯಾಗಿ ರೈತರ ಚಟುವಟಿಕೆಗೆ ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಪರ್ವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎತ್ತುಗಳಿಗೆ ವಿಶೇಷ ಬಹುಮಾನ ವಿತರಿಸಿ ಪೂಜೆ ಸಲ್ಲಿಸಲಾಯಿತು.
ಕುರುಬರ ಬಂಗಾರಪ್ಪ, ಹಡದಿ ರಾಜಪ್ಪ, ಜಜ್ಜೇರಿ ಡಾಕಪ್ಪ, ಕರಗುತ್ತಿ ನಾಗರಾಜಪ್ಪ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.