
ಸಾಗರ: ಶರಾವತಿ ಜಲವಿದ್ಯುತ್ ಯೋಜನೆಗಾಗಿ ಬಳಸಲಾಗದೆ ಉಳಿದಿರುವ, ಸದ್ಯ ಕೆಪಿಸಿ ವಶದಲ್ಲಿರುವ ಅಂದಾಜು 20 ಸಾವಿರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಈ ಹಿಂದೆ ಪತ್ರ ಬರೆದಿದ್ದರು. ಇದನ್ನು ಹಿಂದಕ್ಕೆ ಪಡೆಯುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಿಗೆ ಪತ್ರ ಬರೆದು ಕೋರಿದ್ದಾರೆ.
ನಿಯಮಾನುಸಾರ ಯೋಜನೆಗೆ ಮಂಜೂರಾದ ಭೂಮಿಯನ್ನು ಬಳಕೆ ಮಾಡದೆ ಇದ್ದರೆ, ಅದನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕಾಗುತ್ತದೆ. 20 ಸಾವಿರ ಎಕರೆ ಭೂಮಿ ಬಳಕೆಯಾಗದೆ ಇದ್ದಲ್ಲಿ ಮತ್ತು ಅದನ್ನು ಯಾರಾದರೂ ಒತ್ತುವರಿ ಮಾಡಿದ್ದಲ್ಲಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಚಿವರು 2025ರ ಅಕ್ಟೋಬರ್ 23 ರಂದು ಪತ್ರ ಬರೆದಿದ್ದರು.
‘ಶರಾವತಿ ಜಲ ವಿದ್ಯುತ್ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಮುಳುಗಡೆ ಸಂತ್ರಸ್ತರು 5 ದಶಕಗಳಿಗೂ ಹೆಚ್ಚು ಕಾಲದಿಂದ ಈ ತುಂಡು ಭೂಮಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರು ಭೂ ಮಾಫಿಯಾಗೆ ಸೇರಿದವರು ಅಥವಾ ಪಟ್ಟಭದ್ರ ಹಿತಾಸಕ್ತಿ ಹೊಂದಿದವರಲ್ಲ. ಅಂತಹವರಿಗೆ ಸಾಗುವಳಿ ಚೀಟಿ, ಹಕ್ಕುಪತ್ರ ನೀಡಬೇಕಿದೆ’ ಎಂದು ಬೇಳೂರು ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ನೀವು ಬರೆದಿರುವ ಪತ್ರ ಮಲೆನಾಡು ಪ್ರದೇಶದ 15 ಸಾವಿರಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ. ಮುಂದಿನ ಶಾಸನೀಯ ಕ್ರಮ ಜರುಗಿಸುವವರೆಗೆ ತಮ್ಮ ಟಿಪ್ಪಣಿಯನ್ನು ವಾಪಾಸ್ ಪಡೆಯಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.