
ಕಾರ್ಗಲ್: ನಾಡಿನ ಪ್ರಖ್ಯಾತ ಧಾರ್ಮಿಕ ಶ್ರದ್ದಾಕೇಂದ್ರ ಮತ್ತು ಪ್ರವಾಸಿ ತಾಣವಾಗಿ ರೂಪುಗೊಂಡಿರುವ ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರದ ಸರ್ವತೋಮುಖವಾದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿರುವುದಾಗಿ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿಗೆ ಸಮೀಪದ ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶಂಕು ಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು.
ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರಕ್ಕೆ ರಾಜ್ಯ ಮತ್ತು ಅಂತರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿನ ದೈವಿಕ ಸ್ವರೂಪದ ಶಕ್ತಿಯ ಆರಾಧನೆಯೊಂದಿಗೆ, ಪ್ರಕೃತಿದತ್ತವಾದ ಶರಾವತಿ ಕಣಿವೆಯ ಸೊಬಗನ್ನು ಸವಿಯಲು ಇಲ್ಲಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾಡಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರವನ್ನು ಸೇರ್ಪಡೆಗೊಳಿಸಲಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಸರ್ಕಾರದ ನೇರ ಅನುದಾನ ಮತ್ತು ಪ್ರವಾಸೋದ್ಯಮ ಇಲಾಖೆಯ ಅನುದಾನಗಳನ್ನು ಇಲ್ಲಿ ಬಳಸಿಕೊಂಡು ಸಕಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಸ್ಥಳೀಯರಿಗೆ ಮತ್ತು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಲಭ್ಯವಾಗುವಂತೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈಗಾಗಲೇ ರೂ 2 ಕೋಟಿ ವೆಚ್ಛದಲ್ಲಿ ಕೆಪಿಸಿ ನಿಗಮದಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಕೊಡಿಸಿದ್ದು, ದೇಗುಲದ ನೇರ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ 15 ಲಕ್ಷದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದು ವಡನ್ ಬೈಲು ಬಳೆ ಪದ್ಮಾವತಿ ದೇವಿಯ ಚತುರ್ಮುಖ ಬಸದಿಯ ವಾರ್ಷಿಕೋತ್ಸವ ಸಮಾರಂಭದ ವೇಧಿಕೆಯಲ್ಲಿ ತಿಳಿಸಿದರು. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರರಾಜಯ್ಯ ಜೈನ್, ಜೈನ ಸಮಾಜದ ಪ್ರಮುಖರಾದ ಮೋಹನ್ ಕುಮಾರ್ ಜೈನ್ ಬಿದರೂರು, ವಿದ್ಯಾಧರ ಇಂದ್ರ ಜೈನ್ ಬಿದರೂರು, ಪ್ರಧಾನ ಅರ್ಚಕರಾದ ಗಿಡ್ಡಪ್ಪ ಜೈನ್, ದರ್ಶನ್ ಜೈನ್, ರಾಜೂ ಜೈನ್ ಹೆನ್ನಿ, ಸುಜಾತಾ ಜೈನ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.