ADVERTISEMENT

ಕಾಗೋಡು ತಿಮ್ಮಪ್ಪ ಅವರ ಎದೆಗೆ ಚೂರಿ ಹಾಕಿದ್ದು ಹಾಲಪ್ಪ: ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 7:35 IST
Last Updated 23 ಏಪ್ರಿಲ್ 2023, 7:35 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕುಟುಂಬವನ್ನೇ ಒಡೆಯುವ ಮೂಲಕ ಹಾಲಪ್ಪ ಅವರು ಕಾಗೋಡು ಎದೆಗೆ ಚೂರಿ ಹಾಕಿದ್ದಾರೆಯೇ ಹೊರತು ಕಾಗೋಡು ಹೇಳಿರುವಂತೆ ಚೂರಿ ಹಾಕಿರುವುದು ಅವರ ಪುತ್ರಿಯಲ್ಲ ಎಂದು ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.

‘ಈ ಹಿಂದೆ ಬಂಗಾರಪ್ಪ ಅವರ ಕುಟುಂಬ ಒಡೆದ ಹಾಲಪ್ಪ ಭವಿಷ್ಯದಲ್ಲಿ ಯಡಿಯೂರಪ್ಪ ಅವರ ಕುಟುಂಬವನ್ನು ಒಡೆದರೂ ಆಶ್ಚರ್ಯವಿಲ್ಲ. ಕಾಗೋಡು ಪುತ್ರಿ ರಾಜನಂದಿನಿ ಅವರು ಬಿಜೆಪಿಗೆ ಹೋಗಿದ್ದಕ್ಕೆ ಕಾಗೋಡು ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿನ ಶಾಪ ಹಾಲಪ್ಪ ಅವರಿಗೆ ತಟ್ಟದೇ ಇರದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸ್ವಾಭಿಮಾನಕ್ಕಾಗಿ ನಾನು ಬಿಜೆಪಿಗೆ ಸೇರಿದ್ದೇನೆ. ನನ್ನ ತಂದೆಯ ಬಗ್ಗೆ ಹೀನಾಯವಾಗಿ ಮಾತನಾಡಿದ ವ್ಯಕ್ತಿಯ ಪರವಾಗಿ ಮತ ಕೇಳಲು ಮನಸ್ಸಾಗದೇ ಕಾಂಗ್ರೆಸ್ ತೊರೆದಿದ್ದೇನೆ ಎಂದು ರಾಜನಂದಿನಿ ಹೇಳುತ್ತಿದ್ದಾರೆ. ಈ ಭಾವನೆ ಅವರಿಗೆ ಐದು ವರ್ಷಗಳ ಹಿಂದೆ ಕಾಗೋಡು ಸ್ಪರ್ಧಿಸಿದಾಗ ಅವರ ಪರವಾಗಿ ನಾನು ಸತತವಾಗಿ ಪ್ರಚಾರ ಕೈಗೊಂಡಾಗ ಏಕೆ ಬರಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಹಾಲಪ್ಪ ಅವರು ಕೆಜೆಪಿ ಸೇರಿದಾಗ ಬಿಜೆಪಿಯನ್ನು ಮಣ್ಣುಮುಕ್ಕಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಬಿಜೆಪಿಯ ನಿಷ್ಠಾವಂತರಂತೆ ಮಾತನಾಡುತ್ತಿದ್ದಾರೆ. ನಾನು ಈ ಹಿಂದೆ ಕೆಲವು ರಾಜಕೀಯ ನಾಯಕರನ್ನು ಟೀಕೆ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರು ಹರಿಯ ಬಿಡುತ್ತಿದ್ದಾರೆ. ಅದೇ ರೀತಿ ಹಾಲಪ್ಪ ಅವರ ಹೇಳಿಕೆಯನ್ನೂ ಜಾಲತಾಣದಲ್ಲಿ ಹಾಕಲಿ’ ಎಂದು ಸವಾಲು ಹಾಕಿದರು.

‘ಅಭಿವೃದ್ಧಿಯ ಜೊತೆಗೆ ಜನರ ಪ್ರೀತಿ, ವಿಶ್ವಾಸ ಗಳಿಸುವುದು ರಾಜಕಾರಣದಲ್ಲಿ ಮುಖ್ಯ. ಆದರೆ ಹಾಲಪ್ಪ ಅವರು ದಬ್ಬಾಳಿಕೆಯಿಂದ ಐದು ವರ್ಷಗಳ ಕಾಲ ಇಲ್ಲಿ ಹಿಟ್ಲರ್ ಮಾದರಿಯ ಆಡಳಿತವನ್ನು ನೀಡಿದ್ದಾರೆ. ಈ ಕಾರಣಕ್ಕೆ ಬಿಜೆಪಿಯ ಕೆಲವು ಮುಖಂಡರೇ ಅವರ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುತ್ತಿದ್ದಾರೆ. ಹಾಲಪ್ಪ ಅವರ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು ಟೀಕಿಸಿದರು.

‘ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಕಾರಣಕ್ಕೆ ಹಲವರು ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಬಾರಿ ಬಿಜೆಪಿ ಎಂಬುದು ಒಡೆದ ಮನೆಯಾಗಿದೆ. ಹೀಗಾಗಿ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದ್ದು ರಾಜ್ಯದಲ್ಲಿ ಪಕ್ಷ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ಪ್ರಮುಖರಾದ ಐ.ಎನ್. ಸುರೇಶ್ ಬಾಬು, ಮಧು ಮಾಲತಿ, ಸುಮಂಗಲಾ ರಾಮಕೃಷ್ಣ, ಅನಿತಾ ಕುಮಾರಿ, ಕೆ.ಎಲ್. ಭೋಜರಾಜ್, ಅಶೋಕ್ ಬೇಳೂರು, ಕಲಸೆ ಚಂದ್ರಪ್ಪ, ಲಲಿತಮ್ಮ, ರವಿ ಲಿಂಗನಮಕ್ಕಿ, ಹೊಳೆಯಪ್ಪ, ಡಿ. ದಿನೇಶ್, ಷಣ್ಮುಖ ಸೂರನಗದ್ದೆ, ಸಂತೋಷ್ ಸದ್ಗುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.