ADVERTISEMENT

ಬಸವಾಪಟ್ಟಣ | ಗಗನಕ್ಕೇರಿದ ವೀಳ್ಯದೆಲೆ ದರ; ಇಳುವರಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 7:23 IST
Last Updated 3 ಮಾರ್ಚ್ 2025, 7:23 IST
ಬಸವಾಪಟ್ಟಣದಲ್ಲಿ ವೀಳ್ಯದೆಲೆ ಮಾರಾಟ ಮಾಡುತ್ತಿರುವ ವ್ಯಾಪಾರಿ ಮೇಘರಾಜ್‌
ಬಸವಾಪಟ್ಟಣದಲ್ಲಿ ವೀಳ್ಯದೆಲೆ ಮಾರಾಟ ಮಾಡುತ್ತಿರುವ ವ್ಯಾಪಾರಿ ಮೇಘರಾಜ್‌   

ಬಸವಾಪಟ್ಟಣ: ಗ್ರಾಮೀಣ ಭಾಗದ ಜನ, ದಿನ ನಿತ್ಯ ಬಳಸುವ ವೀಳ್ಯದೆಲೆಯ ದರ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಎರಡು ತಿಂಗಳ ಹಿಂದೆ ಸಾಮಾನ್ಯ ಗಾತ್ರದ 80 ವೀಳ್ಯದೆಲೆಗಳ ಒಂದು ಕಟ್ಟಿಗೆ ₹ 60 ಇತ್ತು. ಈಗ ₹ 120ಕ್ಕೆ ಏರಿಕೆಯಾಗಿದೆ. ದೊಡ್ಡ ಗಾತ್ರದ 100 ಎಲೆಗಳ ಕಟ್ಟು ₹ 150ಕ್ಕೆ ಹೆಚ್ಚಿದೆ.

‘ಶಿವರಾತ್ರಿ ಹಾಗೂ ವಿವಿಧ ರಥೋತ್ಸವ ಮತ್ತು ಜಾತ್ರೆ ನಿಮಿತ್ತ ವೀಳ್ಯದೆಲೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಏರಿಕೆ ಆಗಿದೆ. ಜೊತೆಗೆ ಬಿಸಿಲಿನ ತಾಪಕ್ಕೆ ತೋಟಗಳಲ್ಲಿನ ಬಳ್ಳಿಗಳಲ್ಲಿ ಎಲೆಗಳು ಕಡಿಮೆಯಾಗಿವೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಾವು ಕೇಳಿದಷ್ಟು ವೀಳ್ಯದೆಲೆ ರೈತರಿಂದ ದೊರೆಯುತ್ತಿಲ್ಲ’ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳಾದ ಗಂಗಮ್ಮ ಮತ್ತು ಮೇಘರಾಜ್.

ADVERTISEMENT

‘ಮಳೆಗಾಲದಲ್ಲಿ ಎಕರೆಗೆ ತಲಾ 15,000 ಎಲೆಗಳ 10ರಿಂದ 12 ಪೆಂಡಿ ಎಲೆಗಳು ದೊರೆಯುತ್ತಿದ್ದವು. ಆದರೆ, ಈಗ ಎರಡರಿಂದ ಮೂರು ಪೆಂಡಿಗಳು ಮಾತ್ರ ದೊರೆಯುತ್ತಿವೆ. ಅಂದರೆ ಇಳುವರಿ ತುಂಬಾ ಕಡಿಮೆಯಾಗಿದೆ. ಬದಲಾದ ಹವಾಮಾನ, ಅಂತರ್ಜಲದ ಕೊರತೆ ಇದಕ್ಕೆ ಕಾರಣವಾಗಿದ್ದು, ಮೂಡುಗಾಳಿಯ ಪರಿಣಾಮ ಎಲೆಗಳ ಗಾತ್ರವೂ ದಪ್ಪವಾಗಿವೆ’ ಎನ್ನುತ್ತಾರೆ ಬೆಳ್ಳೂಡಿಯ ವೀಳ್ಯದೆಲೆ ಬೆಳೆಗಾರ ಹನುಮಂತಪ್ಪ.

‘ಬಸವಾಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ಚನ್ನಗಿರಿ ತಾಲ್ಲೂಕಿನ ವಡ್ನಾಳ್‌, ಹೊನ್ನಾಳಿ ತಾಲ್ಲೂಕಿನ ಮಾದಾಪುರ ಮತ್ತು ನೆರೆಯ ಗ್ರಾಮಗಳು, ಹರಿಹರ ತಾಲ್ಲೂಕಿನ ಬೆಳ್ಳೂಡಿ ಮತ್ತು ನೆರೆಯ ಗ್ರಾಮಗಳಿಂದ ವೀಳ್ಯದೆಲೆ ಸರಬರಾಜಾಗುತ್ತವೆ. ಚಳಿಗಾಲದಲ್ಲಿ ಮೂಡುಗಾಳಿಯಿಂದ ಸಾಮಾನ್ಯವಾಗಿ ಮರಗಿಡಗಳ ಎಲೆಗಳು ಉದುರುವಂತೆ ವೀಳ್ಯದೆಲೆಗಳೂ ಉದುರುತ್ತವೆ. ಇದರಿಂದ ಫಸಲು ಕಡಿಮೆಯಾಗುವುದು ಸಾಮಾನ್ಯ’ ಎಂದು ವ್ಯಾಪಾರಿ ನಿಂಗಪ್ಪ ಹೇಳಿದರು.

‘ಜವಾರಿ ಎಲೆ ದುಬಾರಿ ಆಗುವುದರೊಂದಿಗೆ ಪಾನ್‌ ಬೀಡಾಕ್ಕೆ ಬಳಸುವ ಕೋಲ್ಕತ್ತ ವೀಳ್ಯದೆಲೆಯ ದರವೂ ಹೆಚ್ಚಳವಾಗಿದೆ. ಎರಡು ತಿಂಗಳ ಹಿಂದೆ 150 ಎಲೆಗಳ ಒಂದು ಕಟ್ಟು ₹ 400ಕ್ಕೆ ದೊರೆಯುತ್ತಿತ್ತು. ಈಗ ಅದು ₹ 800ಕ್ಕೆ ಏರಿಕೆಯಾಗಿದೆ. ಆದರೆ, ಪಾನ್‌ ಬೀಡಾ ಬೆಲೆಯನ್ನು ಮಾತ್ರ ₹ 15ಕ್ಕಿಂತ ಹೆಚ್ಚು ಏರಿಸಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಇಲ್ಲಿನ ಪಾನ್‌ಬೀಡಾ ವ್ಯಾಪಾರಿ ಪಿ.ಮುಜೀಬುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.