ADVERTISEMENT

ಶಿವಮೊಗ್ಗ : ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಡಿ.ಕೆ. ಶಿವಕುಮಾರ್‌ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:34 IST
Last Updated 13 ಸೆಪ್ಟೆಂಬರ್ 2025, 5:34 IST
   

ಶಿವಮೊಗ್ಗ: ‘ನಾಡಿನ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾದರೆ ಮಾತ್ರ ರೈತರ ಜೀವನ ಸುಭದ್ರವಾಗಿರಲು ಸಾಧ್ಯ. ಅಚ್ಚುಕಟ್ಟು ರೈತರ ಹೃದಯ ಶ್ರೀಮಂತಿಕೆಯಿಂದ ಜಲಾಶಯ ತುಂಬಿದೆ. ಇಲ್ಲಿ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ‌’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

ಜಲಸಂಪನ್ಮೂಲ ಇಲಾಖೆ ಮತ್ತು ರಾಜ್ಯ ನಿರಾವರಿ ನಿಗಮ ಸಹಯೋಗದಲ್ಲಿ ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಂತೋಷದಿಂದ ಬಂದಿದ್ದೇನೆ. ಐದು ಜಿಲ್ಲೆಗಳಿಗೆ ಭದ್ರೆಯು ವಿಸ್ತರಿಸಿದ್ದಾಳೆ. ರೈತರು ಯಾವುದೇ ಸರ್ಕಾರಿ ಸಂಬಳ ಪಡೆಯುವುದಿಲ್ಲ. ಇಂತಹ ರೈತರ ಏಳಿಗೆಗೆ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳನ್ನು ದುರಸ್ಥಿಗೊಳಿಸುವಂತೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಅವರು ₹ 100 ಕೋಟಿ ಯೋಜನೆಯ ಪ್ರಸ್ತಾವ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಅವಕಾಶ ಸಿಕ್ಕಾಗ ಪುಣ್ಯದ ಕೆಲಸಗಳನ್ನು ಮಾಡಬೇಕು. ಇಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗಿವೆ‌. ರಾಜ್ಯದಲ್ಲಿ 2028ಕ್ಕೂ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ‌‌. ಕಾಂಗ್ರೆಸ್ ಜನರ ನಂಬಿಕೆ ಉಳಿಸಿಕೊಳ್ಳುತ್ತದೆ’ ಎಂದರು. 

ರಾಜ್ಯ ಸರ್ಕಾರದ ₹ 2 ಕೋಟಿ ಅನುದಾನದಲ್ಲಿ ನಿರ್ಮಿಸಿದ ಪ್ರವಾಸಿ ಮಂದಿರವನ್ನು ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಿದರು. ದಾವಣಗೆರೆ ಹಾಗೂ ಜಲಾಶಯ ಅಚ್ಚುಕಟ್ಟು ಜಿಲ್ಲೆಗಳಿಂದ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ತರೀಕೆರೆ ಶಾಸಕ ಬಿ.ಎಚ್.ಶ್ರೀನಿವಾಸ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹರಪ್ಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಗುಬ್ಬಿ ಶಾಸಕ ಶ್ರೀನಿವಾಸ, ನಿರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ, ಜಿಲ್ಲಾಧಿಕಾರಿಗಳಾದ ಗಂಗಾಧರ ಸ್ವಾಮಿ, ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸ್ಥಳೀಯ ಶಾಸಕರಾದ ಬಿ.ಕೆ.ಸಂಗಮೇಶ್ವರ, ಬಲ್ಕಿಸ್ ಬಾನು, ಪ್ರಮುಖರಾದ ಜಿ. ಪಲ್ಲವಿ, ಕೆ.ಪಿ.ಅಂಶುಮಂತ್, ಎಚ್.ಎಸ್.ಸುಂದರೇಶ್ ಇದ್ದರು.

ಜಿಲ್ಲೆಯ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಕೋರಿಕೆ ಮೇರೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಇದರ ಸದುಪಯೋಗ ಆಗಬೇಕು.
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

‘ಕುಡಿಯುವ ನೀರು ಯೋಜನೆ ಪರಿಶೀಲಿಸಿ’ ‘ಭದ್ರಾ ಜಲಾಶಯದಿಂದ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕುತ್ತಿದೆ. ಜಲಾಶಯದ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 1236 ಗ್ರಾಮಗಳಿಗೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಜಲಜೀವನ್‌ ಮಿಷನ್ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು’ ಎಂದು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.