ADVERTISEMENT

ಭದ್ರ ಜಲಾಶಯ ತುಂಬಲು 4 ಅಡಿ ಬಾಕಿ: ಜನರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 8:36 IST
Last Updated 23 ಆಗಸ್ಟ್ 2020, 8:36 IST
   

ಶಿವಮೊಗ್ಗ: ಸತತ ಮೂರನೇ ವರ್ಷವೂ ಭದ್ರ ಜಲಾಶಯ ಗರಿಷ್ಠಮಟ್ಟ ತಲುಪುತ್ತಿದ್ದು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರಗುರ್ಗ ಜಿಲ್ಲೆಗಳ ಜನರಲ್ಲಿ ಸಂಪೃಪ್ತಿಯ ಭಾವ ಮೂಡಿಸಿದೆ.

ನೀರಾವರಿ ಯೋಜನೆಯ ಬಹುಮುಖ್ಯ ಜಲಾಶಯ ಭದ್ರೆಯ ಭರ್ತಿಗೆ ನಾಲ್ಕು ಅಡಿ ಬಾಕಿ ಇದ್ದು ಯಾವುಧೇ ಕ್ಷಣದಲ್ಲಿ ಕ್ರಸ್ಟ್‌ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ‌. ಹಿಂದಿನ ಎರಡು ವರ್ಷಗಳೂ ಭದ್ರಾ ಜಲಾಶಯ ಗರಿಷ್ಠ ಮಟ್ಟ 186 ತಲುಪಿತ್ತು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಜಲಾಶಯವೇ ಆಧಾರ.

ADVERTISEMENT

186 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯ 2015ರಲ್ಲಿ 169, 2016ರಲ್ಲಿ 158 ಹಾಗೂ 2017ರಲ್ಲಿ 172 ಅಡಿಗೆ ತಲುಪಿತ್ತು. ಮೂರು ವರ್ಷಗಳು ಜಲಾಶಯ ಭರ್ತಿಯಾಗದ ಪರಿಣಾಮ ಅಚ್ಚುಕಟ್ಟು ಪ್ರದೇಶದ ರೈತರು ಎರಡು ಭತ್ತದ ಬೆಳೆ ತ್ಯಾಗ ಮಾಡಿದ್ದರು. 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಬೇಕಿದ್ದ 10 ಲಕ್ಷ ಟನ್ ಭತ್ತದ ಬೆಳೆ ಖೋತಾ ಆಗಿತ್ತು.

2018ರಿಂದ ರೈತರ ಹರ್ಷದ ಹೊನಲು ಮುಂದುವರಿದಿದೆ. ಜಲಾಶಯ ಗರಿಷ್ಠ ಮಟ್ಟ ತಲುಪಿದರೆ 71.53 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಅದರಲ್ಲಿ 13.832 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್, 7 ಟಿಎಂಸಿ ಅಡಿ ಕುಡಿಯುವ ನೀರಿನ ಯೋಜನೆಗಳು, ಕೈಗಾರಿಕೆಗಳ ಬಳಕೆಗೆ ಮೀಸಲು. ಉಳಿದದ್ದು ಅಚ್ಚುಕಟ್ಟು ಪ್ರದೇಶ ಬೆಳೆಗಳಿಗೆ ಹರಿಸಲಾಗುತ್ತದೆ.

5 ದಶಕದಲ್ಲಿ 28 ಬಾರಿ ಭರ್ತಿ: ಐದೂವರೆ ದಶಕಗಳ ಇತಿಹಾಸದಲ್ಲಿ ಗರಿಷ್ಠ ಮಟ್ಟ ತಲುಪಿರುವುದು 28 ಬಾರಿ. 1969ರಲ್ಲಿ ಮೊದಲ ಬಾರಿ ಗರಿಷ್ಠ ಮಟ್ಟ ತಲುಪಿತ್ತು. 1990ರಿಂದ 94ರವರೆಗೆ ಐದು ವರ್ಷ ನಿರಂತರವಾಗಿ ಭರ್ತಿಯಾಗಿತ್ತು. ಮತ್ತೆ 2005ರಿಂದ 11ರವರೆಗೆ ಸತತ 6 ವರ್ಷ ಗರಿಷ್ಠಮಟ್ಟ ತಲುಪಿತ್ತು. 2013, 2014ರಲ್ಲೂ ಜಲಾಶಯ ಭರ್ತಿಯಾಗಿತ್ತು. (ಕೆಲವು ಬಾರಿ 180 ಅಡಿ ದಾಟಿದರೂ ಪೂರ್ಣ ಮಟ್ಟ ಮುಟ್ಟಿಲ್ಲ) ಇಲ್ಲಿಯವರೆಗೆ ಮತ್ತೆ ಮೂರು ವರ್ಷ ಸತತವಾಗಿ ಭರ್ತಿಯಾಗಿದೆ.

‘ಒಳ ಹರಿವು ಕಡಿಮೆಯಾಗಿದೆ. ಹಾಗಾಗಿ, ತಕ್ಷಣ ನದಿಗೆ ನೀರು ಹರಿಸುವ ಸಾಧ್ಯತೆ ಕಡಿಮೆ. ಜಲಾಶಯ ತುಂಬುವ ಹಂತ ತಲುಪಿರುವುದು ಅಚ್ಚುಕಟ್ಟು ಪ್ರದೇಶದ ರೈತರ ನೆಮ್ಮದಿಗೆ ಕಾರಣವಾಗಿದೆ. ಇರುವ ನೀರು ವ್ಯರ್ಥ ಮಾಡದೇ ಅಚ್ಚುಕಟ್ಟಾಗಿ ಬಳಸಬೇಕು’ ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿ ಸದಸ್ಯ ಎಚ್‌.ಆರ್.ಬಸವರಾಜಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.