ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಸಿದ್ಧವಾಗಿದೆ. ಅದನ್ನು ಅಳವಡಿಸುವ ಕಾರ್ಯ ಜಿಟಿಜಿಟಿ ಮಳೆಯ ನಡುವೆ ಶುಕ್ರವಾರ ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್) ಅಧಿಕಾರಿಗಳ ನೇತೃತ್ವದಲ್ಲಿ ಆರಂಭವಾಯಿತು.
ಹಳೆಯ ಗೇಟ್ ಸಂಪೂರ್ಣ ಹಾಳಾಗಿದ್ದರಿಂದ ಹೊಸ ಗೇಟು ಅಳವಡಿಸಲು ಮುಂದಾಗಿದ್ದ ಕೆಎನ್‌ಎನ್, ಮುಂಗಾರು ಹಂಗಾಮಿಗೆ ಎಡದಂಡೆ ನಾಲೆಯಿಂದ ನೀರು ಹರಿಸಿರಲಿಲ್ಲ.
ದೆಹಲಿ ಮೂಲದ ಅಪಾರ್ ಇನ್ಫೋಟೆಕ್ ಕಂಪೆನಿ ಗೇಟ್ ಅಳವಡಿಕೆಯ ಹೊಣೆ ವಹಿಸಿಕೊಂಡಿದೆ. 11 ಟನ್ ತೂಕ, ಆರು ಮೀಟರ್ ಅಗಲ, 12 ಮೀಟರ್ ಉದ್ದದ ಈ ಗೇಟನ್ನು ಶಿವಮೊಗ್ಗದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಅವರ ಶಾಂತಲಾ ಉದ್ಯಮ ಹಾಗೂ ವಿಟೆಕ್ ಎಂಜಿನಿಯರಿಂಗ್ ಸರ್ವಿಸಸ್‌ನಲ್ಲಿ ಸಿದ್ಧಪಡಿಸಲಾಗಿದೆ.
ಸದಾ ನೀರಿನಲ್ಲಿ ಮುಳುಗಿರುವ ಈ ಗೇಟ್‌ಗೆ ಸುಲಭವಾಗಿ ತುಕ್ಕು ಹಿಡಿಯದಂತೆ ತಡೆಯಲು ಹಾಗೂ ಒತ್ತಡ ತಡೆದುಕೊಳ್ಳಲು ಅಗತ್ಯವಿರುವಂತೆ ರೂಪಿಸಬೇಕಿತ್ತು. ಹೀಗಾಗಿ ಗೇಟ್ ತಯಾರಿಸಲು ಅತ್ಯಾಧುನಿಕ ಗುಣಮಟ್ಟದ ಉಕ್ಕನ್ನು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ಒದಗಿಸಿದೆ. ತಾಂತ್ರಿಕ ವಿನ್ಯಾಸವನ್ನು ಅಪಾರ್ ಕಂಪೆನಿ ತಂತ್ರಜ್ಞರು ಮಾಡಿದ್ದಾರೆ ಎಂದು ಕೆಎನ್‌ಎನ್ ಅಧಿಕಾರಿಗಳು ಹೇಳುತ್ತಾರೆ.
ಎಡದಂಡೆ ನಾಲೆಯ ಗೇಟ್ ಲಾಕ್ ಆಗಿ ಸ್ಟ್ರಕ್ ಆಗಿ ಬಹಳ ವರ್ಷಗಳೇ ಆಗಿದ್ದು, ಅದು ಮೇಲೆ ಬರುತ್ತಿತ್ತು. ಆದರೆ ಕೆಳಗೆ ಹೋದಾಗ ಸರಿಯಾಗಿ ಕುಳಿತುಕೊಳ್ಳುತ್ತಿರಲಿಲ್ಲ. ಇದರಿಂದ ನಿರಂತರವಾಗಿ ನೀರು ಸೋರಿಕೆ ಆಗುತ್ತಿತ್ತು. ಹೀಗಾಗಿ ಕೆಎನ್‌ಎನ್ ಹೊಸ ಗೇಟ್ ಅಳವಡಿಕೆಗೆ ನಿರ್ಧರಿಸಿತ್ತು. ಹೊಸ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲು ಒಂದು ವಾರ ಆಗಲಿದೆ ಎಂದು ತಿಳಿದುಬಂದಿದೆ.
ಎಡದಂಡೆ ಕಾಲುವೆ; ಆಗಸ್ಟ್ 5ರಿಂದ ನೀರು..
ಗೇಟ್ ಅಳವಡಿಸುವ ಕಾಮಗಾರಿಯ ನಡುವೆಯೇ ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಆಗಸ್ಟ್ 5ರಿಂದ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ಮುಂದಾಗಿದೆ. ಮಳೆ ಚೆನ್ನಾಗಿ ಆಗಿರುವುದರಿಂದ ಸದ್ಯ ತೋಟಗಳಿಗೆ ನೀರಿನ ಅಗತ್ಯ ಇಲ್ಲ. ಹೀಗಾಗಿ ಕಾಲುವೆಯ ಅರ್ಧ ಭಾಗ 160 ಕ್ಯುಸೆಕ್‌ನಷ್ಟು ನೀರು ಬಿಡಲಿದ್ದೇವೆ. ಹೊಸ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ನಂತರ ಸಂಪೂರ್ಣ ನೀರು (360 ಕ್ಯುಸೆಕ್) ಹರಿಸಲಾಗುವುದು ಎಂದು ಕೆಎನ್‌ಎನ್ ಮೂಲಗಳು ತಿಳಿಸಿವೆ. ಭದ್ರಾ ಎಡದಂಡೆ ಕಾಲುವೆಯ ವಿಸ್ತಾರ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕುಗಳಲ್ಲಿ 77 ಕಿ.ಮೀ ದೂರ ಹಾದು ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.