ADVERTISEMENT

ಭದ್ರಾ ಜಲಾಶಯದ ನಿರ್ವಹಣೆ ಹೊಣೆ: ಪರ–ವಿರೋಧ ಚರ್ಚೆ; ಸರ್ಕಾರದ ಅಂಗಳದಲ್ಲಿ ಚೆಂಡು

ವೆಂಕಟೇಶ ಜಿ.ಎಚ್.
Published 4 ಫೆಬ್ರುವರಿ 2026, 4:08 IST
Last Updated 4 ಫೆಬ್ರುವರಿ 2026, 4:08 IST
ಲಕ್ಕವಳ್ಳಿಯ ಭದ್ರಾ ಜಲಾಶಯದ ನೋಟ
ಲಕ್ಕವಳ್ಳಿಯ ಭದ್ರಾ ಜಲಾಶಯದ ನೋಟ   

ಶಿವಮೊಗ್ಗ: ‘ಭದ್ರಾ ಜಲಾಶಯದ ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮದಿಂದ (ಕೆಎನ್‌ಎನ್‌) ಬಿಡುಗಡೆಗೊಳಿಸಿ ವಿಶ್ವೇಶ್ವರಯ್ಯ ಜಲ ನಿಗಮದ (ವಿಜೆಎನ್‌ಎಲ್‌) ವ್ಯಾಪ್ತಿಗೆ ಕೊಡಲಾಗುತ್ತಿದೆ’ ಎಂಬ ವಿಚಾರ ಭದ್ರಾ ಕಣಿವೆ ನೀರಾವರಿ ಯೋಜನೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈಗ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಅದಕ್ಕೆ ಪೂರಕವಾಗಿ ಭದ್ರಾ ಬಲದಂಡೆ ನಾಲೆ ವ್ಯಾಪ್ತಿಯ ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ನಿಯೋಗ ಮಂಗಳವಾರ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಜಲಾಶಯದ ನಿರ್ವಹಣೆಯ ಜವಾಬ್ದಾರಿಯನ್ನು ಈಗಿರುವಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲೇ ಮುಂದುವರಿಸುವಂತೆ ಮನವಿ ಮಾಡಿದೆ.

ಯಥಾ ಸ್ಥಿತಿಯೇ ಇರಲಿ:

ADVERTISEMENT

‘ಭದ್ರಾ ನೀರಾವರಿ ಯೋಜನಾ ವೃತ್ತವು 1965ರಿಂದಲೂ ಎಡದಂಡೆ ಹಾಗೂ ಬಲದಂಡೆ ನಾಲೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈಗ ಯೋಜನಾ ವೃತ್ತವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರ ಮಾಡುವ ಔಚಿತ್ಯವೇನು? ಅಷ್ಟಕ್ಕೂ ಕಡಿಮೆ ನೀರು ಬಳಕೆ ಮಾಡುವವರು ಹೆಚ್ಚು ನೀರು ಬಳಸುವವರ ಮೇಲೆ ಆಡಳಿತ ನಡೆಸುವುದು ಸರಿಯೇ’ ಎಂಬುದು ಈ ಭಾಗದ ರೈತ ಮುಖಂಡರ ಪ್ರಶ್ನೆ.

ಕೇಂದ್ರ ಸ್ಥಾನ (ಮುಖ್ಯ ಎಂಜಿನಿಯರ್ ಕಚೇರಿ) ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸ್ಥಳಾಂತರ ಆದಲ್ಲಿ ಸರ್ಕಾರಕ್ಕೆ ಭದ್ರಾ ಮೇಲ್ದಂಡೆ ಮೇಲೆಯೇ ಹೆಚ್ಚು ಗಮನ ಹರಿಯಲಿದೆ. ಆ ಭಾಗದ ರಾಜಕೀಯ ಹಿಡಿತ ಹೆಚ್ಚಲಿದೆ. ಕ್ರಮೇಣ ಸೂಪರಿಂಟೆಂಡೆಂಟ್ ಕಚೇರಿ ಮುಚ್ಚಲಾಗುತ್ತದೆ. ಈಗ ಜಲಾಶಯದ ಮಗ್ಗುಲಲ್ಲೇ ಮುಖ್ಯ ಎಂಜಿನಿಯರ್ ಕಚೇರಿ ಇರುವುದರಿಂದ ತುರ್ತು ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತಿದೆ. ಚಿತ್ರದುರ್ಗಕ್ಕೆ ಸ್ಥಳಾಂತರಗೊಂಡಲ್ಲಿ ಅದಕ್ಕೆ ಅವಕಾಶವಿರುವುದಿಲ್ಲ ಎನ್ನುತ್ತಾರೆ.

ಡಿಸಿಎಂ ಭೇಟಿಯಾದ ನಿಯೋಗದಲ್ಲಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಇದ್ದರು.

ದಾವಣಗೆರೆ ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳು ರೈತ ಮುಖಂಡರು ಮಂಗಳವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಭದ್ರಾ ಜಲಾಶಯದ ನಿರ್ವಹಣೆಯ ಜವಾಬ್ದಾರಿಯನ್ನು ಕೆಎನ್‌ಎನ್ ಇಲ್ಲವೇ ವಿಜೆಎನ್‌ಎಲ್‌ಗೆ ವಹಿಸುವ ವಿಚಾರದಲ್ಲಿ ಸಂಬಂಧಿಸಿದವರ ಸಭೆ ಕರೆದು ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಜಲಾಶಯ ವಿಜೆಎನ್‌ಎಲ್‌ಗೆ ಹೋದರೆ ನಮ್ಮ ಸ್ವಾಯುತ್ತತೆ ಕಡಿಮೆ ಆಗಿ ಆ ಭಾಗದವರು ಮೇಲುಗೈ ಪಡೆಯಲಿದ್ದಾರೆ. ನೀರು ಹರಿಸುವ ವಿಚಾರ ಅಭಿವೃದ್ಧಿ ವಿಷಯದಲ್ಲಿ ಬಹುಮತದ ಮೇಲೆ ತೀರ್ಮಾನ ಕೈಗೊಂಡಲ್ಲಿ ನಮಗೆ ನ್ಯಾಯ ಸಿಗಲಾರದು
ಎಚ್‌.ಆರ್.ಬಸವರಾಜಪ್ಪ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ
ಜಲಾಶಯ ನಿರ್ವಹಣೆಗೆ ಇಬ್ಬರು ವ್ಯವಸ್ಥಾಪರ ಬದಲು ಒಬ್ಬರೇ ಇದ್ದರೆ ನಿರ್ಧಾರ ಕೈಗೊಳ್ಳಲು ಅನುಕೂಲ. ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಇಳಿಯಿತು ಎಂಬಂತಾಗದೇ ನಮ್ಮ ಪಾಲನ್ನು ನಾವು ನ್ಯಾಯವಾಗಿ ಪಡೆಯಲು ಸಾಧ್ಯ
ಕೆ.ಆರ್‌.ದಯಾನಂದ್‌ ಚಿತ್ರದುರ್ಗ ನೀರಾವರಿ ಅನುಷ್ಠಾನ ಸಮಿತಿ ಪ‍್ರಧಾನ ಕಾರ್ಯದರ್ಶಿ

ವಿಜೆಎನ್‌ಎಲ್‌ಗೆ ಸೇರ್ಪಡೆ ಮಾಡಿ; ಹೋರಾಟ ಸಮಿತಿ

ಭದ್ರಾ ಜಲಾಶಯ ಹಾಲಿ ಕರ್ನಾಟಕ ನೀರಾವರಿ ನಿಗಮದ ಸುಪರ್ದಿಯಲ್ಲಿದೆ. ಚಿತ್ರದುರ್ಗ ಚಿಕ್ಕಮಗಳೂರು ತುಮಕೂರು ಜಿಲ್ಲೆಗಳ ವ್ಯಾಪ್ತಿಯ ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮ ಅನುಷ್ಠಾನಗೊಳಿಸುತ್ತಿದೆ. 

‘ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಪಡೆಯಬೇಕಾದರೆ ಎರಡು ನಿಗಮಗಳ ನಡುವೆ ಸಂಘರ್ಷ ಸೃಷ್ಟಿಯಾಗಬಹುದು. ತುರ್ತು ಸಂದರ್ಭದಲ್ಲಿ ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ನಡುವೆ ಒಮ್ಮತ ಮೂಡದೇ ಇರಬಹುದು. ಹಾಗಾಗಿ ಭದ್ರಾ ಜಲಾಶಯದ ನಿರ್ವಹಣೆ ಜವಾಬ್ದಾರಿಯನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವಹಿಸಿ ಒಬ್ಬರೇ ವ್ಯವಸ್ಥಾಪಕ ನಿರ್ದೇಶಕರು ಇರುವಂತೆ ನೋಡಿಕೊಳ್ಳಿ’ ಎಂಬುದು ಚಿತ್ರದುರ್ಗದ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಆಗ್ರಹ.

ವಿಜೆಎನ್‌ಎಲ್‌ಗೆ ಸೇರ್ಪಡೆ ಆದರೆ ಸಂಪನ್ಮೂಲ ಹೆಚ್ಚು ಲಭಿಸುತ್ತದೆ. ಭದ್ರಾ ಜಲಾಶಯವನ್ನು ವಿಜೆಎನ್‌ಎಲ್‌ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಸಮಿತಿ ಈಚೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿತ್ತು. ಭದ್ರಾ ಜಲಾಶಯದ ಕಾಡಾ ಸಮಿತಿಯಲ್ಲಿ ಚಿತ್ರದುರ್ಗ ಜಿಲ್ಲೆಗೂ ಸೂಕ್ತ ಸ್ಥಾನಮಾನ ಬೇಕು ಎಂಬ ಬೇಡಿಕೆ ಮಂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.