ADVERTISEMENT

ಭದ್ರಾ ಜಲಾಶಯ | 16,000 ಕ್ಯುಸೆಕ್ ನೀರು ನದಿಗೆ: ಭರ್ತಿಗೆ 6 ಅಡಿ ಬಾಕಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:43 IST
Last Updated 27 ಜುಲೈ 2025, 5:43 IST
ಶಿವಮೊಗ್ಗ ನಗರದ ಬಳಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ
ಶಿವಮೊಗ್ಗ ನಗರದ ಬಳಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ   

ಶಿವಮೊಗ್ಗ: ಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಳಹರಿವು 20,000 ಕ್ಯೂಸೆಕ್‌ ಮೀರಿದ್ದು, ಶುಕ್ರವಾರ ಸಂಜೆಯಿಂದಲೇ ಕ್ರಸ್ಟ್‌ಗೇಟ್‌ಗಳ ಮೂಲಕ 16,857 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

186 ಅಡಿ ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಇದೀಗ 180.6 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 6 ಅಡಿ ಬಾಕಿ ಇದೆ. ಜಲಾಶಯದ ಒಳಹರಿವು 21,568 ಕ್ಯುಸೆಕ್ ಇದ್ದು, ಬಲದಂಡೆ ನಾಲೆಗೆ 2,000 ಕ್ಯೂಸೆಕ್ ಸೇರಿದಂತೆ ಒಟ್ಟು 21,568 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ದಿನ (2024 ಜುಲೈ 26) ಭದ್ರಾ ಜಲಾಶಯದಲ್ಲಿ 174.3 ಅಡಿ ನೀರಿನ ಸಂಗ್ರಹ ಇತ್ತು. 35,318 ಕ್ಯುಸೆಕ್ ಒಳಹರಿವು ಇತ್ತು.

ADVERTISEMENT

ತುಂಗಾ ಹರಿವೂ ಅಧಿಕ:

ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತಿತರ ಭಾಗಗಳಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಶನಿವಾರ 49,139 ಕ್ಯುಸೆಕ್ ಒಳಹರಿವು ಇದೆ. 58,879 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಶಿವಮೊಗ್ಗ ನಗರದ ಬಳಿ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ.

ಎರಡೂ ಜಲಾಶಯಗಳಿಂದ ಹೊರಬಿಟ್ಟ ನೀರು ಹಾಗೂ ಸತತ ಮಳೆಯಿ ನೀರೂ ಸೇರಿ ತುಂಗಭದ್ರಾ ನದಿಯಲ್ಲಿ 75,000ಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿಯುತ್ತಿದೆ. ಇದರಿಂದಾಗಿ ದಾವಣಗೆರೆ ಜಿಲ್ಲೆಯ ಬಳಿ ತುಂಗಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ.

ಲಿಂಗನಮಕ್ಕಿ ಜಲಾಶಯಕ್ಕೂ 67,856 ಕ್ಯೂಸೆಕ್‌ ಒಳಹರಿವು ಇದೆ. ಪ್ರಸ್ತುತ 1,808.35 ಅಡಿಯಷ್ಟು ನೀರಿನ ಸಂಗ್ರಹವಿದೆ. 3,335 ಕ್ಯೂಸೆಕ್‌ ಹೊರಹರಿವು ಇದೆ. ಮಾಣಿ ಜಲಾಶಯ ಭರ್ತಿ ಆಗುವ ಹಂತ ತಲುಪಿದ್ದು, ನದಿಗೆ ಯಾವುದೇ ಕ್ಷಣ ನೀರು ಹರಿಸಬಹುದು ಎಂದು ಮೂಲಗಳು ಹೇಳವೆ.

ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನದ ಸ್ನಾನ ಘಟ್ಟ ತಂಗುದಾಣಗಳು ಶನಿವಾರ ಜಲಾವೃತವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.