ADVERTISEMENT

ಭದ್ರಾ ಮೇಲ್ದಂಡೆ; ವಿ.ವಿ. ಸಾಗರಕ್ಕೆ ನೀರು ಜುಲೈ 27ರಿಂದ

ನಾಲ್ಕು ತಿಂಗಳು ಕಾಲ 4.25 ಟಿಎಂಸಿ ಅಡಿ ನೀರು ಹರಿವು: ವಿಜೆಎನ್‌ಎಲ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:04 IST
Last Updated 23 ಜುಲೈ 2025, 5:04 IST
ಲಕ್ಕವಳ್ಳಿಯ ಭದ್ರಾ ಜಲಾಶಯ
ಲಕ್ಕವಳ್ಳಿಯ ಭದ್ರಾ ಜಲಾಶಯ   

ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಜುಲೈ 27ರಿಂದ ನೀರು ಹರಿಸಲಾಗುತ್ತದೆ. ಮುಂದಿನ ನಾಲ್ಕು ತಿಂಗಳವರೆಗೆ 4.25 ಟಿಎಂಸಿ ಅಡಿ ನೀರು ಹರಿಯಲಿದೆ.  

ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ.

ಶಾಂತಿಪುರ ಪಂಪ್ ಹೌಸ್-1, ಜಂಭದಹಳ್ಳ ಅಕ್ವಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್ ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಟ್ಟೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ ಹೆದ್ದೂರು, ಕಾಟಿನಗೆರೆ, ಬೆಣಕುಣಿಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಎಚ್. ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ. ತಿಮ್ಮಾಪುರ ಗ್ರಾಮಗಳ ಮಾರ್ಗವಾಗಿ ಹರಿದು ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸರ್ಕಾರದ ನಿರ್ದೇಶನದಂತೆ ನೀರು ಹರಿಸಲಾಗುತ್ತಿದೆ. 

ADVERTISEMENT

ಆದ್ದರಿಂದ, ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರು ಕಾಲುವೆ ಒಳಗಡೆ ಇಳಿಯುವುದು ಹಾಗೂ ಇತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಈ ಸೂಚನೆಗಳನ್ನು ಉಲ್ಲಂಘಿಸುವುದು, ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‌ಸೆಟ್  ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲನಿಗಮದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.